ಜೀರ್ಣಕ್ರಿಯೆಯ ಮೇಲೆ ನಿಗಾ ವಹಿಸಿ ಅದನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಸವಾಲಿನ ಕೆಲಸವೇ ಹೌದು. ಈ ವ್ಯವಸ್ಥೆ ಹಾಳಾದರೆ ಫಿಟ್ ನೆಸ್, ಆರೋಗ್ಯ, ನಿದ್ರೆ ಒಟ್ಟಾರೆ ನಿಯಮಿತ ಚಕ್ರದ ಮೇಲೆಯೇ ಪರಿಣಾಮ ಬೀರುತ್ತದೆ. ಸರಳವಾಗಿ ಜೀರ್ಣವಾಗುವ ಆಹಾರಗಳನ್ನು ಉಪಹಾರದಲ್ಲಿ ಸೇರಿಸಿಕೊಳ್ಳುವ ಮೂಲಕ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು.
ದಿನದ ಮೊದಲ ಆಹಾರವಾಗಿ ಪಪ್ಪಾಯ ಸೇವಿಸಿ. ಬೆಳಗಿನ ಉಪಹಾರಕ್ಕೆ ಇದನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ಸಮಸ್ಯೆ ನಿಮ್ಮನ್ನು ಕಾಡದು. ಇದರಲ್ಲಿರುವ ಪಪೈನ್ ಎಂಬ ಜೀರ್ಣಕಾರಿ ಕಿಣ್ವ ನಿಮ್ಮ ಉದರ ಸಂಬಂಧಿ ಸಮಸ್ಯೆಗಳ ಬಗ್ಗೆ ಎಚ್ಚರ ವಹಿಸುತ್ತದೆ.
ಆ್ಯಪಲ್ ನಲ್ಲಿ ವಿಟಮಿನ್ ಎ ಮತ್ತು ಸಿ ಸಮೃದ್ಧವಾಗಿದೆ. ಇದರಲ್ಲಿ ಹಲವು ಖನಿಜಗಳು ಮತ್ತು ಪೊಟ್ಯಾಶಿಯಂಗಳನ್ನು ಒಳಗೊಂಡಿದೆ. ಮಲಬದ್ಧತೆ ನಿವಾರಣೆಗೂ ಇದು ಸಹಕಾರಿ. ಇದರಲ್ಲಿ ಫೈಬರ್ ಸಾಕಷ್ಟಿರುವುದರಿಂದ ಜೀರ್ಣಾಂಗ ವ್ಯವಸ್ಥೆಯನ್ನು ಸರಿಯಾಗಿರುವಂತೆ ನೋಡಿಕೊಳ್ಳುತ್ತದೆ.
ಸೌತೆಕಾಯಿ ಅಥವಾ ಮುಳ್ಳುಸೌತೆಯಲ್ಲಿರುವ ಎರೆಪ್ಸಿನ್ ಎಂಬ ಅಂಶ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಗ್ಯಾಸ್ಟಿಕ್ ಮತ್ತು ಹೊಟ್ಟೆಯ ಹುಣ್ಣುಗಳಿಂದ ಇದು ರಕ್ಷಣೆ ನೀಡುತ್ತದೆ.
ಬಾಳೆಹಣ್ಣಿನಲ್ಲಿ ಫೈಬರ್ ಅಂಶವಿದ್ದು ಕರುಳಿನ ಚಲನೆಗೆ ಇದು ಸಹಾಯಕಾರಿ. ಬಾಳೆಹಣ್ಣು ಬೆಳಗಿನ ಉಪಹಾರಕ್ಕೆ ಹೇಳಿ ಮಾಡಿಸಿದ ತಿನಿಸು. ಬೆಳಗ್ಗೆ ಖಾಲಿ ಹೊಟ್ಟೆಗೆ ಜೇನುತುಪ್ಪ ಮತ್ತು ಲಿಂಬೆ ರಸ ಬೆರೆಸಿದ ಬಿಸಿನೀರನ್ನು ಕುಡಿಯುವುದರಿಂದ ನಿಮ್ಮ ಜೀರ್ಣಕ್ರಿಯೆ ಚುರುಕುಗೊಳ್ಳುತ್ತದೆ. ಇದು ತೂಕ ಇಳಿಸಲು ಕೂಡಾ ಸಹಕಾರಿ.