ಮಳೆಗಾಲದಲ್ಲಿ ಸಂಜೆಯಾಗುತ್ತಲೇ ಗುಯ್ ಎಂದು ಸದ್ದು ಹೊರಡಿಸುವ ಸೊಳ್ಳೆಗಳ ಕಾಟ ವಿಪರೀತ ಹೆಚ್ಚುತ್ತದೆ. ಕೆಲವೊಮ್ಮೆ ಸೊಳ್ಳೆ ಕಚ್ಚಿದ ಜಾಗದಲ್ಲಿ ಊತ ಕಾಣಿಸಿಕೊಂಡು ವಿಪರೀತ ನೋಯುವುದೂ ಉಂಟು.
ಸೊಳ್ಳೆ ಕಚ್ಚದಂತೆ ತಡೆಯಲು ಸಂಜೆಯಾಗುತ್ತಲೇ ನೀವು ಹೊರಹೋಗುವಾಗ ಕೈ – ಕಾಲುಗಳಿಗೆ ತೆಂಗಿನೆಣ್ಣೆ ಹಚ್ಚಿ. ಹೀಗಿದ್ದೂ ಕಚ್ಚಿ ಗಾಯಗಳಾದರೆ ಐಸ್ ಅನ್ನು ನೇರವಾಗಿ ತ್ವಚೆಯ ಮೇಲಿಡಿ. ಹದಿನೈದು ನಿಮಿಷ ಕಾಲ ಹೀಗೆ ಮಾಡಿದರೆ ತುರಿಕೆ ಹಾಗೂ ನೋವು ಮಾಯವಾಗುತ್ತದೆ.
ಅಲೋವೇರಾದಲ್ಲೂ ನಂಜು ನಿರೋಧಕ ಗುಣವಿದ್ದು, ಇದು ತುರಿಕೆ ಮತ್ತು ಊತವನ್ನು ಕಡಿಮೆ ಮಾಡುತ್ತದೆ. ಅದರ ಸಿಪ್ಪೆ ತೆಗೆದು ಲೋಳೆಯನ್ನು ತ್ವಚೆಯ ಮೇಲಿಟ್ಟು 15 ನಿಮಿಷ ಉಜ್ಜಿ.
ಲಿಂಬೆರಸಕ್ಕೆ ತುಳಸಿ ಪೇಸ್ಟ್ ಬೆರೆಸಿ ಸೊಳ್ಳೆ ಕಚ್ಚಿದ ಜಾಗಕ್ಕೆ ಹಚ್ಚಿಕೊಂಡರೆ ಅದು ನೋವು ಹಾಗೂ ಉರಿಯನ್ನು ಕಡಿಮೆ ಮಾಡುತ್ತದೆ. ಪುದಿನಾ ಎಲೆಗಳೂ ಇದೇ ಪ್ರಯೋಜನವನ್ನು ನೀಡುತ್ತವೆ.
ಈರುಳ್ಳಿ ಹಾಗೂ ಬೆಳ್ಳುಳ್ಳಿ ಪೇಸ್ಟ್ ನ ವಾಸನೆ ಕೀಟಗಳನ್ನು ದೂರವಿಡುತ್ತದೆ. ಚಿಟಿಕೆ ಉಪ್ಪಿನಿಂದ ಆ ಜಾಗವನ್ನು ತಿಕ್ಕಿಕೊಂಡರೂ ಸಾಕು ತುರಿಕೆ ಕಡಿಮೆಯಾಗುತ್ತದೆ.