ಈ ಮಳೆಗಾಲದಲ್ಲಿ ಕೊರೋನಾ ಹೊರತಾಗಿ ನೀರಿನಿಂದಲೇ ಹರಡಬಲ್ಲ ಮತ್ತಿತರ ರೋಗಗಳ ಕುರಿತು ಗಮನ ಹರಿಸುವುದು ಬಹಳ ಮುಖ್ಯ. ಅದರಲ್ಲೂ ಮಳೆಗಾಲದಲ್ಲೇ ಕಾಡುವ ಟೈಫಾಯಿಡ್, ಅತಿಸಾರ ಭೇದಿ, ಹೆಪಟೈಟಿಸ್ ಎ ಮತ್ತು ಇ, ಜಾಂಡಿಸ್ ಮೊದಲಾದ ರೋಗಗಳ ಬಗ್ಗೆ ಹೆಚ್ಚಿನ ಎಚ್ಚರ ವಹಿಸಬೇಕು.
ಮಳೆಗಾಲದಲ್ಲಿ ಮುಖ್ಯವಾಗಿ ಹಸಿರು ಎಲೆಗಳ ಮೇಲೆ ಕೀಟಗಳ ಅಥವಾ ಹುಳುಗಳ ಸಂತಾನೋತ್ಪತ್ತಿ ನಡೆಯುವುದರಿಂದ ಕಡ್ಡಾಯವಾಗಿ ಸೊಪ್ಪು ಸೇವನೆಯಿಂದ ದೂರವಿರಬೇಕು. ಇಂಥ ತರಕಾರಿ ಸೇವನೆಯಿಂದ ಜೀರ್ಣಕ್ರಿಯೆ ಸಮಸ್ಯೆಗಳೂ ಕಾಣಿಸಿಕೊಳ್ಳಬಹುದು.
ಉಳಿದೆಲ್ಲಾ ಋತುಮಾನಗಳಂತೆ ಮಳೆಗಾಲದಲ್ಲೂ ಹಣ್ಣು, ತರಕಾರಿಗಳನ್ನು ತೊಳೆದು ತಿನ್ನುವುದು ಬಹಳ ಮುಖ್ಯ. ದೀರ್ಘ ಕಾಲ ಹಾಳಾಗದಂತೆ ಉಳಿಯಲು ರಾಸಾಯನಿಕ ಸಿಂಪಡಿಸಿರುವ ಕಾರಣದಿಂದ ಹಣ್ಣು ಮತ್ತು ತರಕಾರಿಗಳನ್ನು ತೊಳೆದೇ ಸೇವಿಸಬೇಕು.
ಸೀಸನಲ್ ಫ್ರುಟ್ ಗಳಿಗೇ ಆದ್ಯತೆ ನೀಡಿ. ಸ್ಥಳೀಯ ಹಣ್ಣುಗಳು ಮತ್ತು ತರಕಾರಿಗಳನ್ನು ನಮ್ಮ ದೇಹ ಸುಲಭದಲ್ಲಿ ಜೀರ್ಣಿಸಿಕೊಳ್ಳುತ್ತದೆ. ಬೇಸಿಗೆಯಲ್ಲಿ ಮಾವಿನ ಹಣ್ಣು ತಿನ್ನಬೇಕೇ ಹೊರತು ಮಳೆಗಾಲದಲ್ಲಿ ಅಲ್ಲ.
ಹಸಿ ಆಹಾರಕ್ಕಿಂತ ಬೇಯಿಸಿದ ಆಹಾರ ಸೇವಿಸುವುದೇ ಒಳ್ಳೆಯದು. ಅರಿಶಿನ, ಶುಂಠಿ, ಬೆಳ್ಳುಳ್ಳಿ, ಜೀರಿಗೆ, ಲವಂಗ ಹಾಕಿದ ಚಹಾ ಕುಡಿಯಿರಿ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವುದು ಬಹಳ ಮುಖ್ಯ ಎಂಬುದನ್ನು ನೆನಪಿಡಿ.