ಮಳೆಗಾಲದಲ್ಲಿ ಸೋಂಕು ಹರಡುವುದು ಸರ್ವೇ ಸಾಮಾನ್ಯ. ದೇಹವನ್ನು ಶೀತ, ಜ್ವರ ಕೆಮ್ಮುವಿನಿಂದ ರಕ್ಷಿಸಿಕೊಳ್ಳುವ ಜೊತೆ ತ್ವಚೆಯ ಆರೈಕೆಯೂ ಬಹಳ ಮುಖ್ಯ. ಕಾಲಿನ ಅದರಲ್ಲೂ ಹಿಮ್ಮಡಿ ಹಾಗೂ ಬೆರಳುಗಳ ಮೃದುವಾದ ತ್ವಚೆ ಒಮ್ಮೆ ಒಡಕು ಬಿಟ್ಟರೆ ಮಳೆಗಾಲ ಮುಗಿಯುವ ತನಕ ಹಾಗೆಯೇ ಉಳಿದು ಬಿಡುತ್ತದೆ. ಅದನ್ನು ಸರಿಪಡಿಸಲು ಒಂದಷ್ಟು ಮನೆ ಮದ್ದುಗಳಿವೆ.
ಮೆಹಂದಿ ಗಿಡದ ಎಲೆಗಳನ್ನು ಚೆನ್ನಾಗಿ ತೊಳೆದು ರುಬ್ಬಿ ಪೇಸ್ಟ್ ಮಾಡಿ ಕಾಲು ಬೆರಳುಗಳ ಮಧ್ಯೆ ಮತ್ತು ಪಾದದ ಸುತ್ತ ಹಚ್ಚಿಕೊಳ್ಳಿ. ಒಣಗಿದ ಬಳಿಕ ತಣ್ಣೀರಿನಿಂದ ತೊಳೆಯಿರಿ. ನೀರಿನಲ್ಲಿ ಕಾಲನ್ನು ಹೆಚ್ಚು ಹೊತ್ತು ನೆನೆಯಲು ಬಿಡಬೇಡಿ. ಸಾಧ್ಯವಾದರೆ ತುಸು ಎತ್ತರದ ಚಪ್ಪಲಿ ಬಳಸಿ.
ಅರಶಿನದಲ್ಲೂ ಭಾರೀ ಪ್ರಮಾಣದ ಆಂಟಿ ಬ್ಯಾಕ್ಟೀರಿಯಾ ಗುಣ ಇರುವುದರಿಂದ ಅರಿಶಿನಕ್ಕೆ ತೆಂಗಿನೆಣ್ಣೆ ಬೆರೆಸಿ ತಯಾರಿಸಿದ ಪೇಸ್ಟ್ ಅನ್ನು ಹಿಮ್ಮಡಿಗೆ ಮತ್ತು ಬೆರಳುಗಳ ಮಧ್ಯಕ್ಕೆ ಹಚ್ಚಿ ಮಲಗಿ, ಬೇಕಿದ್ದರೆ ಕಾಲಿಗೆ ಪ್ಲಾಸ್ಟಿಕ್ ಕವರ್ ಕಟ್ಟಿ. ಒಂದೇ ವಾರದಲ್ಲಿ ಕಾಲಿನ ನಂಜು ನಿವಾರಣೆಯಾಗುತ್ತದೆ.
ನಿಂಬೆರಸ, ಈರುಳ್ಳಿ ರಸ, ಬೆಣ್ಣೆಯೂ ಅತ್ಯುತ್ತಮ ಪರಿಣಾಮ ಬೀರುತ್ತವೆ. ಇವನ್ನು ರಾತ್ರಿ ಹಚ್ಚಿ ಬೆಳಗ್ಗೆ ಉಗುರು ಬೆಚ್ಚಗಿನ ನೀರಿನಲ್ಲಿ ತೊಳೆದುಕೊಂಡರೆ ಸಾಕು.