ಮಳೆಗಾಲದಲ್ಲಿ ಸೋಂಕುಕಾರಕ ರೋಗಾಣುಗಳು ಹೆಚ್ಚಿರುವುದರಿಂದ ನಮ್ಮ ಹಾಗೂ ಕುಟುಂಬದವರ ಆರೋಗ್ಯ ಕಾಪಾಡುವುದು ಬಹಳ ಮುಖ್ಯ. ಅದಕ್ಕಾಗಿ ಒಂದಿಷ್ಟು ಟಿಪ್ಸ್ ಗಳು ಇಲ್ಲಿವೆ.
ಮಳೆಗಾಲದಲ್ಲಿ ಮನೆಯಿಂದ ಹೊರ ಹೋಗುವಾಗ ಚಪ್ಪಲಿಗಳನ್ನು ಧರಿಸಿ, ಶೂ ಬಳಕೆ ತಾತ್ಕಾಲಿಕವಾಗಿ ನಿಲ್ಲಿಸಿ. ಸಾಕ್ಸ್ ಧರಿಸಿದರೆ ಒಳಗಿನ ಭಾಗದಲ್ಲಿ ಫಂಗಲ್ ಸೋಂಕು ಉಂಟಾಗುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ಎಲ್ಲೇ ಹೋಗುವುದಿದ್ದರೂ ಚಪ್ಪಲಿ ಧರಿಸಿ.
ಮೈ ಬೆವರುವುದಿಲ್ಲ ಎಂಬ ಕಾರಣಕ್ಕೆ ನಿತ್ಯ ಸ್ನಾನವನ್ನು ಮಿಸ್ ಮಾಡದಿರಿ. ಹೊರಗಿನ ವಾತಾವರಣದಿಂದ ಬರುವ ಸೂಕ್ಷ್ಮ ಜೀವಿಗಳು ತ್ವಚೆಯ ಮೇಲೆ ಅಲರ್ಜಿ ಉಂಟು ಮಾಡಬಹುದು. ಇದರಿಂದ ಪಾರಾಗಲು ನೀರಿಗೆ ಚಿಟಿಕೆ ಉಪ್ಪು ಬೆರೆಸಿ ಸ್ನಾನ ಮಾಡುವುದು ಒಳ್ಳೆಯದು.
ಸ್ನಾನವಾದ ಬಳಿಕ ಉತ್ತಮ ದರ್ಜೆಯ ಸನ್ ಸ್ಕ್ರೀನ್ ಲೋಷನ್ ಗಳನ್ನೇ ಬಳಸಿ. ಬಿಸಿಲಿಗೆ ಹೊರ ಹೋಗುವುದಿಲ್ಲ ಎಂಬ ಕಾರಣಕ್ಕೆ ಲೋಷನ್ ಗಳಿಂದ ದೂರ ಉಳಿಯದಿರಿ. ಮಕ್ಕಳಿಗಾದರೆ ಟಾಲ್ಕಂ ಪೌಡರ್ ಬಳಸಿ.
ಕಾಲಿನಲ್ಲಿ ಅಲರ್ಜಿ ಲಕ್ಷಣಗಳು ಕಂಡು ಬಂದರೆ ಬೆಚ್ಚಗಿನ ನೀರಿಗೆ ನಿಂಬೆ ಹನಿ ಹಾಕಿ ಸ್ವಲ್ಪ ಹೊತ್ತು ಅದರಲ್ಲಿ ಕಾಲಿಟ್ಟು ಕುಳಿತುಕೊಳ್ಳಿ. ಸ್ನಾನದ ವೇಳೆ ಅಲರ್ಜಿ ನಿವಾರಕ ಸೋಪು ಬಳಸುವುದೂ ಒಳ್ಳೆಯದು.