ಈ ಸಲ ಮಳೆ ಮುಗಿಯುವ ಲಕ್ಷಣಗಳೇ ಕಾಣಿಸುತ್ತಿಲ್ಲ. ಹಾಗಾಗಿ ಮಳೆಗಾಲದ ರೋಗಗಳಿಗೂ ವಿರಾಮ ಸಿಕ್ಕಿಲ್ಲ.
ಮಳೆಗಾಲದಲ್ಲಿ ಸಾಮಾನ್ಯವಾಗಿ ಸೊಳ್ಳೆಗಳಿಂದ ಹರಡುವ ಮಲೇರಿಯಾ ಕಾಯಿಲೆಗೆ ಔಷಧ ತೆಗೆದುಕೊಂಡು ನೀವು ಆರೋಗ್ಯವಂತರಾದರೂ ನಿಶ್ಯಕ್ತಿ ನಿಮ್ಮನ್ನು ಬಿಡದೆ ಕಾಡುತ್ತದೆ. ಶೀಘ್ರ ಗುಣಮುಖರನ್ನಾಗಿ ಮಾಡುವ ಕೆಲವು ಆಹಾರ ಕ್ರಮಗಳು ಇಲ್ಲಿವೆ.
ದಿನವಿಡೀ ದ್ರವಾಹಾರ ಸೇವಿಸುವುದು ಬಹಳ ಮುಖ್ಯ. ಜ್ವರದಿಂದ ಬಳಲುವಾಗ ನಿರಂತರವಾಗಿ ನೀರು ಕುಡಿಯುತ್ತಿರಬೇಕು. ನೀರಿನಂಶ ಹೆಚ್ಚಿರುವ ಸೌತೆ, ಕಿತ್ತಳೆ, ಕಲ್ಲಂಗಡಿ ಹಣ್ಣುಗಳನ್ನು ಸೇವಿಸಿ. ಇದರಿಂದ ದೇಹದ ಕಲ್ಮಶಗಳೂ ದೂರವಾಗುತ್ತವೆ. ಜ್ವರಕ್ಕೆ ನೀವು ತೆಗೆದುಕೊಳ್ಳುವ ಔಷಧಿ ಅಡ್ಡ ಪರಿಣಾಮ ಬೀರದಂತೆಯೂ ನೋಡಿಕೊಳ್ಳುತ್ತದೆ.
ಪ್ರೊಟೀನ್ ಯುಕ್ತ ಆಹಾರಗಳನ್ನು ಸೇವಿಸಿ. ದ್ವಿದಳ ಧಾನ್ಯ, ಬೀಜ, ಹಸಿರು ತರಕಾರಿ, ಡೈರಿ ಉತ್ಪನ್ನ ಹೆಚ್ಚು ಸೇವಿಸಿ. ಮೊಳಕೆ ಬರಿಸಿದ ಕಾಳುಗಳ ಸೇವನೆ ಅತ್ಯುತ್ತಮ.
ಕೊಬ್ಬಿನಂಶ ಹೆಚ್ಚಿರುವ ಆಹಾರಗಳನ್ನು ಸಾಧ್ಯವಾದಷ್ಟು ಕಡಿಮೆ ಸೇವಿಸಿ. ಇದರಿಂದ ಜೀರ್ಣಪ್ರಕ್ರಿಯೆ ಮತ್ತಷ್ಟು ನಿಧಾನವಾಗಬಹುದು. ಅಥವಾ ಇತರ ಸಮಸ್ಯೆಗಳು ಕಂಡು ಬರಬಹುದು.