ಬೇಸಿಗೆ ಕಾಲದಲ್ಲಿ ಸಲಾಡ್, ಜ್ಯೂಸ್ ಗಳನ್ನು ಹೆಚ್ಚೆಚ್ಚು ಸೇವಿಸಿದರೆ ಒಳ್ಳೆಯದು. ಅದು ಅಲ್ಲದೇ ಕಲ್ಲಂಗಡಿ ಹಣ್ಣುಗಳನ್ನು ಹೆಚ್ಚು ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಈ ಕಲ್ಲಂಗಡಿ ಹಣ್ಣಿನಿಂದ ರುಚಿಕರವಾದ ಸಲಾಡ್ ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ.
ಬೇಕಾಗುವ ಸಾಮಾಗ್ರಿ:
3 ಕಪ್- ಕಲ್ಲಂಗಡಿ ಹೋಳುಗಳು, 2 ಟೇಬಲ್ ಸ್ಪೂನ್-ಜೇನುತುಪ್ಪ, 2 ಟೇಬಲ್ ಸ್ಪೂನ್-ಲಿಂಬೆಹಣ್ಣಿನರಸ, 1 ಟೀ ಸ್ಪೂನ್-ಸಕ್ಕರೆ, ½ ಟೀ ಸ್ಪೂನ್-ಕಾಳುಮೆಣಸಿನ ಪುಡಿ, ಸ್ವಲ್ಪ ಉಪ್ಪು. 10-ಪುದೀನಾ ಎಸಳು.
ಮಾಡುವ ವಿಧಾನ:
ಕಲ್ಲಂಗಡಿ ಹಣ್ಣನ್ನು ಕತ್ತರಿಸಿಕೊಂಡು ಅದರ ಸಿಪ್ಪೆ, ಬೀಜವನ್ನೆಲ್ಲಾ ತೆಗೆದು ಚಿಕ್ಕ ಚಿಕ್ಕ ಹೋಳುಗಳನ್ನಾಗಿ ಮಾಡಿಕೊಳ್ಳಿ. ಇದನ್ನು ಒಂದು ದೊಡ್ಡ ಬೌಲ್ ಗೆ ಹಾಕಿಕೊಳ್ಳಿ. ನಂತರ ಒಂದು ಬೌಲ್ ಗೆ ಚೆನ್ನಾಗಿ ತೊಳೆದಿಟ್ಟುಕೊಂಡು ಪುದೀನಾ ಎಲೆಗಳನ್ನು ಸೇರಿಸಿ.
ಆಮೇಲೆ ನಿಂಬೆಹಣ್ಣಿನ ರಸ, ಜೇನುತುಪ್ಪ, ಸಕ್ಕರೆ, ಉಪ್ಪು, ಕಾಳುಮೆಣಸಿನ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿಟ್ಟುಕೊಳ್ಳಿ. ಇದನ್ನು ಕತ್ತರಿಸಿಟ್ಟುಕೊಂಡ ಕಲ್ಲಂಗಡಿ ಹಣ್ಣಿಗೆ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ತಕ್ಷಣವೇ ಸವಿಯಿರಿ.