ನವದೆಹಲಿ: ನಿದ್ರಾಹೀನತೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಕೆಲವೊಮ್ಮೆ ವಾಹನ ಚಲಾವಣೆ ಮೇಲೂ ಪರಿಣಾಮ ಬೀರುತ್ತೆ ಎಂಬುದನ್ನು ಕೇಳಿದ್ದೇವೆ ಕೂಡ. ಆದರೆ ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಿರುವವರು ವಾಹನ ಚಲಾವಣೆ ಮಾಡುವುದು ಮಧ್ಯಪಾನ ಮಾಡಿ ವಾಹನ ಓಡಿಸುವುದಕ್ಕಿಂತ ಹೆಚ್ಚು ಅಪಾಯಕಾರಿ ಎಂಬುದು ಹಲವರಿಗೆ ಗೊತ್ತಿಲ್ಲ. ಇದೀಗ ಇಂತಹ ಆಘಾತಕಾರಿ ಮಾಹಿತಿಯೊಂದು ಅಧ್ಯಯನದಿಂದ ಬಹಿರಂಗವಾಗಿದೆ.
ಹಲವರಲ್ಲಿ ನಿದ್ರಾಹೀನತೆ ಸಮಸ್ಯೆ ಕಾಡುತ್ತೆ. ಅದರಲ್ಲೂ ಇಂದಿನ ಆಧುನಿಕ ಜೀವನ ಶೈಲಿ, ಒತ್ತಡದ ಬದುಕು, ಆಹಾರ ಪದ್ಧತಿಯಲ್ಲಿನ ವ್ಯತ್ಯಾಸ ಇಂತಹ ಹಲವು ಕಾರಣಕ್ಕೂ ಕೂಡ ಅನೇಕರಲ್ಲಿ ನಿದ್ರಾಹೀನತೆ ಆರಂಭವಾಗುತ್ತದೆ. ನಿದ್ರೆಯ ಕೊರತೆ ಅಧಿಕ ರಕ್ತದೊತ್ತಡ, ಹೃದಯಾಘಾತ, ಸಕ್ಕರೆ ಕಾಯಿಲೆ, ಪಾರ್ಶ್ವವಾಯು, ಲೈಂಗಿಕ ಆಸಕ್ತಿಯಿಲ್ಲದಿರುವುದು, ಖಿನ್ನತೆ ಮೊದಲಾದ ಗಂಭೀರವಾದ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.
ಇದರ ಜೊತೆಗೆ ಇತ್ತೀಚಿನ ಅಧ್ಯಯನದ ಪ್ರಕಾರ ನಿದ್ದೆ ಸಮಸ್ಯೆಯಿಂದ ಬಳಲುವವರು ವಾಹನ ಚಲಾಯಿಸುವುದೇ ಅಪಾಯಕಾರಿ ಎನ್ನಲಾಗಿದೆ. ನಿದ್ರೆಯಿಲ್ಲದೇ ಇರುವವರಲ್ಲಿ ನೆನಪಿನ ಶಕ್ತಿ ಕುಂದುತ್ತಾ ಬರುತ್ತದೆ, ಏಕಾಗ್ರತೆ ಕಡಿಮೆಯಾಗುತ್ತದೆ, ಸಂದರ್ಭಗಳನ್ನು ಅರ್ಥ ಮಾಡಿಕೊಳ್ಳುವುದು ಕಷ್ಟವಾಗಿ ಗೊಂದಲಗಳು ಹೆಚ್ಚುತ್ತದೆ. ಇದರಿಂದಾಗಿ ಡ್ರೈವಿಂಗ್ ಮೇಲೆ ಸಂಪೂರ್ಣ ಹಿಡಿತ ತಪ್ಪಿ ಅಪಘಾತಗಳು ಹೆಚ್ಚುವ ಸಾಧ್ಯತೆಯಿದೆ ಎಂದು ಅಧ್ಯಯನ ತಿಳಿಸಿದೆ.