ಡ್ರೈಫ್ರೂಟ್ಸ್ ನಮ್ಮ ಪ್ರತಿನಿತ್ಯ ಆಹಾರ ಸೇವನೆಯಲ್ಲಿ ಇರಲೇಬೇಕು. ಯಾಕೆಂದರೆ ಪುಟ್ಟ ಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಡ್ರೈಫ್ರೂಟ್ಸ್ ಸೇವನೆ ಒಂದು ಉತ್ತಮ ಆಹಾರ.
ಯಾವುದೋ ಒಂದು ಡ್ರೈಫ್ರೂಟ್ ತಿನ್ನುವ ಬದಲು ಎಲ್ಲವನ್ನೂ ಒಟ್ಟಿಗೆ ಸೇರಿಸಿ ಉಂಡೆ ಕಟ್ಟಿ ತಿಂದರೆ ಅದರ ಮಜವೇ ಬೇರೆ. ಇಲ್ಲಿದೆ ರುಚಿಯಾಗಿ ಸಿಂಪಲ್ಲಾಗಿ ಡ್ರೈಫ್ರೂಟ್ಸ್ ಲಡ್ಡು ಮಾಡುವ ವಿಧಾನ.
ಬೇಕಾಗುವ ಸಾಮಗ್ರಿಗಳು
ಗೋಡಂಬಿ – 100 ಗ್ರಾಂ
ಬಾದಾಮಿ – 100 ಗ್ರಾಂ
ವಾಲ್ ನಟ್ಸ್ – 100 ಗ್ರಾಂ
ಪಿಸ್ತಾ – 100 ಗ್ರಾಂ
ಒಣದ್ರಾಕ್ಷಿ – 100 ಗ್ರಾಂ
ಅಂಜೂರ – 100 ಗ್ರಾಂ
ಖರ್ಜೂರ – 100 ಗ್ರಾಂ
ಏಲಕ್ಕಿ ಪುಡಿ – 1/2 ಚಮಚ
ತುಪ್ಪ – 4 ಚಮಚ
ಮಾಡುವ ವಿಧಾನ
ಬಾಣಲೆಯಲ್ಲಿ ಸ್ವಲ್ಪ ತುಪ್ಪವನ್ನು ಹಾಕಿ ಒಂದೊಂದೇ ಡ್ರೈ ಫ್ರೂಟ್ಸ್ ಕೆಂಪು ಬಣ್ಣ ಬರುವವರೆಗೆ ಹುರಿದು ಕೊಳ್ಳಬೇಕು. ಒಣ ದ್ರಾಕ್ಷಿ, ಅಂಜೂರ ಮತ್ತು ಖರ್ಜೂರ ಬಣ್ಣ ಬದಲಾದರೆ ಸಾಕು. ಎಲ್ಲವನ್ನೂ ಹುರಿದ ನಂತರ ಪೂರ್ತಿ ಆರಲು ಬಿಡಬೇಕು. ಒಂದೊಂದಾಗಿ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿಕೊಳ್ಳಬೇಕು.
ಅಂಜೂರ, ಖರ್ಜೂರ ಮತ್ತು ಒಣ ದ್ರಾಕ್ಷಿ ಮೂರು ಪೇಸ್ಟ್ ರೀತಿಯಲ್ಲಿ ಅಂಟು ಅಂಟಾಗುತ್ತದೆ. ಇವುಗಳನ್ನು ಪುಡಿ ಮಾಡಿಕೊಂಡ ಬಾದಾಮಿ, ಗೋಡಂಬಿ ಮತ್ತು ವಾಲ್‌ನಟ್ ನೊಂದಿಗೆ ಮಿಶ್ರಣ ಮಾಡಿ ಇಲ್ಲವೇ ಬೇಕಿದ್ದರೆ ಎಲ್ಲವನ್ನೂ ಸೇರಿಸಿ ಇನ್ನೊಂದು ಬಾರಿ ಮಿಕ್ಸಿಯಲ್ಲಿ ತಿರುಗಿಸಿದರೆ ಉಂಡೆ ಕಟ್ಟುವ ಹದಕ್ಕೆ ಮಿಶ್ರಣ ಬರುತ್ತದೆ.
ನಂತರ ಅದಕ್ಕೆ ಏಲಕ್ಕಿ ಪುಡಿಯನ್ನು ಸೇರಿಸಿ ಉಂಡೆಗಳನ್ನು ಕಟ್ಟಬಹುದು. ಈ ಉಂಡೆಗಳನ್ನು ಡಬ್ಬಿಯಲ್ಲಿ ಮುಚ್ಚಿ ಫ್ರಿಜ್ ನಲ್ಲಿಟ್ಟರೆ 15 ದಿನಗಳ ಕಾಲ ತಿನ್ನಬಹುದು.