ಚುಮುಚುಮು ಚಳಿಗೆ ಬಿಸಿ ಬಿಸಿ ಖಾರ ಖಾದ್ಯ ತಿನ್ನಬೇಕು ಎಂಬ ಬಯಕೆ ನಿಮಗೂ ಮೂಡಿದೆಯೇ. ಇದಕ್ಕೆ ನಿಜವಾದ ಕಾರಣ ಏನು ಎಂಬುದನ್ನು ಇಲ್ಲಿ ಹೇಳುತ್ತೇವೆ ಕೇಳಿ.
ಚಳಿಗಾಲದಲ್ಲಿ ಎಣ್ಣೆ ಕುದಿದ ಘಮ ಮೂಗಿಗೆ ತಾಕಿದರೆ ಸಾಕು, ಯಾವುದೇ ಎಣ್ಣೆ ತಿಂಡಿಯ ನೆನಪಾಗಿ ಬಾಯಲ್ಲಿ ನೀರೂರಲು ಆರಂಭವಾಗುತ್ತದೆ. ಇದು ಕೇವಲ ಬಾಯಿಯ ಚಪಲದಿಂದ ಮಾತ್ರವಲ್ಲ. ಇದಕ್ಕೊಂದು ವೈಜ್ಞಾನಿಕ ಕಾರಣವೂ ಇದೆ ಎನ್ನುತ್ತಾರೆ ವಿಜ್ಞಾನಿಗಳು.
ಹೊರಗಿನ ವಾತಾವರಣದ ಉಷ್ಣಾಂಶ ತಗ್ಗಿದಾಗ ದೇಹಕ್ಕೆ ಸಹಜವಾಗಿ ಬೆಚ್ಚಗಿನ ಬಯಕೆಯಾಗುತ್ತದೆ. ಚಳಿಗಾಲದಲ್ಲಿ ವೈರಸ್ ಮೂಲದ ಹಲವು ರೋಗಗಳು ಬಹುಬೇಗ ಅಂಟಿಕೊಂಡು ಹಲವು ರೀತಿಯಲ್ಲಿ ಕಾಟ ಕೊಡುತ್ತವೆ. ಶ್ವಾಸಕೋಶ ಈ ಕಿರಿಕಿರಿಯಿಂದ ತಪ್ಪಿಸಿಕೊಳ್ಳಲು ಖಾರವನ್ನು ಬಯಸುತ್ತದೆ.
ಇದರಲ್ಲಿರುವ ಉಷ್ಣಾಂಶ ಹೆಚ್ಚಿಸುವ ಗುಣ ಈ ವೈರಸ್ ಗಳನ್ನು ದೇಹದಿಂದ ಹೊರಹಾಕುತ್ತದೆ. ಖಾರ ತಿಂದ ಕೂಡಲೆ ಮೂಗಿನಿಂದ ನೀರು ಇಳಿಯುವುದು ಇದೇ ಕಾರಣಕ್ಕೆ. ಚಳಿಗಾಲದಲ್ಲಿ ಖಾರದ ಪದಾರ್ಥಗಳನ್ನು ಸೇವಿಸುವುದರಿಂದ ದೇಹದಲ್ಲಿ ಶಕ್ತಿ ಹಾಗೂ ರಕ್ತದ ಹರಿವು ಹೆಚ್ಚುತ್ತದೆ. ಇದರಿಂದ ಜೀರ್ಣಕ್ರಿಯೆ ಚುರುಕುಗೊಳ್ಳುವುದು ಮಾತ್ರವಲ್ಲ ತೂಕವೂ ಕಡಿಮೆಯಾಗುತ್ತದೆ.
ಮಳೆಗಾಲದಲ್ಲಿ ಬಾಣಂತಿಯರನ್ನು ಬೆಚ್ಚಗಿನ ಕೋಣೆಯೊಳಗೆ ಕುಳ್ಳಿರಿಸಿ ಶೀತವಾಗದಂತೆ ನೋಡಿಕೊಳ್ಳಲು ಬಿಸಿಬಿಸಿಯಾದ ಅಡುಗೆಯೊಂದಿಗೆ ಖಾರದ ಆಹಾರ ಪದಾರ್ಥಗಳನ್ನು ನೀಡುತ್ತಾರೆ. ಇದು ದೇಹವನ್ನು ಒಳಗಿನಿಂದಲೇ ಬೆಚ್ಚಗಿರಿಸಲು ಸಹಕಾರಿ.