ದೇಶದಲ್ಲಿ ಈ ಮೊದಲು ಕೊರೊನಾ ವೈರಸ್ ಕಾಲಿಟ್ಟ ವೇಳೆ ಜನತೆ ಮನೆಮದ್ದುಗಳ ಮೊರೆ ಹೋಗಿದ್ದರು. ಕಷಾಯ, ಬಿಸಿ ನೀರು ಸೇವನೆ ಕಡ್ಡಾಯವಾಗಿ ಮಾಡಲಾಗುತ್ತಿತ್ತಲ್ಲದೆ ಆಹಾರದಲ್ಲೂ ಬಹಳಷ್ಟು ಬದಲಾವಣೆಗಳನ್ನು ಮಾಡಿಕೊಂಡಿದ್ದರು. ಒಂದು ಹಂತದವರೆಗೆ ಇದನ್ನು ಮುಂದುವರೆಸಿದ್ದ ಬಹುತೇಕರು ಯಾವಾಗ ಲಾಕ್ ಡೌನ್ ಸಡಿಲಿಕೆಯಾಗಿ ದೈನಂದಿನ ಜೀವನ ಆರಂಭವಾಯಿತೋ ಎಲ್ಲವನ್ನು ಕೈಬಿಟ್ಟಿದ್ದರು.
ಅದರಲ್ಲೂ ಕೊರೊನಾ ಸೋಂಕಿತರ ಸಂಖ್ಯೆ ದಿನೇ ದಿನೇ ಕಡಿಮೆಯಾಗುತ್ತಾ ಬಂದ ಬಳಿಕ ಕೆಲವಷ್ಟು ಮಂದಿ ಮಾಸ್ಕ್ ಧರಿಸುವುದನ್ನೂ ಮರೆತಿದ್ದರು. ಜೊತೆಗೆ ಸಾಮಾಜಿಕ ಅಂತರವನ್ನೂ ಕಾಪಾಡುತ್ತಿರಲಿಲ್ಲ. ಆದರೆ ಇದೀಗ ದೇಶಕ್ಕೆ ಮತ್ತೆ ಕಾಲಿಟ್ಟಿರುವ ರೂಪಾಂತರ ಕೊರೊನಾ ವೈರಸ್ ಮತ್ತೆ ಮೊದಲಿನ ಸ್ಥಿತಿಗೆ ಬರುವಂತೆ ಮಾಡಿದೆ.
ಬ್ರಿಟನ್ ನಿಂದ ಬಂದ ಕೆಲವರಲ್ಲಿ ರೂಪಾಂತರ ಕೊರೊನಾ ವೈರಸ್ ಕಂಡುಬಂದಿರುವ ಕಾರಣ ಜನತೆ ಈಗ ಕಡ್ಡಾಯವಾಗಿ ಮಾಸ್ಕ್ ಧರಿಸುವುದರ ಜೊತೆಗೆ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾಗುತ್ತಿದ್ದಾರೆ. ಅಲ್ಲದೆ ಈವರೆಗೆ ಕೈಬಿಟ್ಟಿದ್ದ ಕಷಾಯ, ಬಿಸಿನೀರು ಸೇವನೆಯನ್ನು ಮತ್ತೆ ಆರಂಭಿಸಿದ್ದಾರೆ. ಈ ಮೂಲಕ ಕೊರೊನಾ ವೈರಸ್ ನಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದಾರೆ.