ಹೃದಯಾಘಾತಕ್ಕೆ ಸಂಬಂಧಿಸಿದಂತೆ ಅನೇಕ ಸಂಶೋಧನೆಗಳು ನಡೆದಿವೆ. ಎರಡನೇ ಬಾರಿ ಹಾರ್ಟ್ ಅಟ್ಯಾಕ್ ತಪ್ಪಿಸಲು ಸೆಕ್ಸ್ ನಿಂದ ದೂರವಿರಬೇಕೆಂದು ಈ ಹಿಂದೆ ಹೇಳಲಾಗಿತ್ತು. ಆದ್ರೆ ಹೊಸ ಸಂಶೋಧನೆಯಲ್ಲಿ ಎರಡನೇ ಬಾರಿ ಹಾರ್ಟ್ ಅಟ್ಯಾಕ್ ಆಗುವುದನ್ನು ಸೆಕ್ಸ್ ತಪ್ಪಿಸುತ್ತದೆ ಎನ್ನಲಾಗಿದೆ. ಎಂದಿನಂತೆ ಶಾರೀರಿಕ ಸಂಬಂಧದಲ್ಲಿ ಸಕ್ರಿಯವಾಗಿದ್ದರೆ ಹೃದಯಾಘಾತವಾಗುವುದಿಲ್ಲ ಎನ್ನಲಾಗಿದೆ.
ಯುರೋಪಿಯನ್ ಜರ್ನಲ್ ಆಫ್ ಪ್ರಿವೆಂಟಿವ್ ಕಾರ್ಡಿಯಾಲಜಿ, ಸಂಶೋಧನಾ ವರದಿಯನ್ನು ಪ್ರಕಟಿಸಿದ್ದು, ಇದುವರೆಗೆ ವರದಿಯಾದ ಎಲ್ಲಕ್ಕಿಂತ ಭಿನ್ನವಾದ ಅಭಿಪ್ರಾಯವನ್ನು ಇದ್ರಲ್ಲಿ ನೀಡಲಾಗಿದೆ. ಸುಮಾರು ಇಪ್ಪತ್ತು ವರ್ಷಗಳಿಂದ 495 ಜೋಡಿಗಳ ಸಂಶೋಧನೆ ನಡೆಸಿದ್ದಾರೆ. ಇದರಲ್ಲಿ, ಸಾಮಾನ್ಯ ಲೈಂಗಿಕ ಚಟುವಟಿಕೆಗಳನ್ನು ಪ್ರಾರಂಭಿಸಿದ ಶೇಕಡಾ 35ರಷ್ಟು ಜನರಲ್ಲಿ, ಎರಡನೇ ಹೃದಯಾಘಾತದ ಅಪಾಯ ಕಡಿಮೆಯಿತ್ತು.
ಮೊದಲ ಬಾರಿ ಹೃದಯಾಘಾತವಾಗಿ ಚೇತರಿಸಿಕೊಂಡ ನಂತ್ರ ಶಾರೀರಿಕ ಸಂಬಂಧ ಬೆಳೆಸಲು ಶುರು ಮಾಡಿದ ವ್ಯಕ್ತಿಯಲ್ಲಿ ಹೆಚ್ಚಿನ ಶಕ್ತಿ, ಆರೋಗ್ಯ, ಕೆಲಸ ಮಾಡುವ ಕ್ಷಮತೆ ಕಾಣಿಸಿಕೊಂಡಿತ್ತು ಎನ್ನಲಾಗಿದೆ. 495 ರೋಗಿಗಳು 65 ವರ್ಷ ಅಥವಾ ಅದಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. 1992-93ರಲ್ಲಿ ಅವರಿಗೆ ಮೊದಲ ಬಾರಿ ಹೃದಯಾಘಾತವಾಗಿತ್ತು. ಅವರ ಸರಾಸರಿ ವಯಸ್ಸು 53 ಮತ್ತು ಅವರಲ್ಲಿ ಶೇಕಡಾ 90ರಷ್ಟು ಪುರುಷರು. 22 ವರ್ಷಗಳ ನಂತರ 211 ರೋಗಿಗಳು ಸಾವನ್ನಪ್ಪಿದ್ದಾರೆ ಎಂದು ಸಂಶೋಧಕರು ಹೇಳಿದ್ದಾರೆ.
ಉತ್ತಮ ಆರೋಗ್ಯಕ್ಕೆ ನಿಯಮಿತ ಲೈಂಗಿಕತೆಯು ಏಕೈಕ ಅಂಶವೆಂದು ಸಂಶೋಧನೆಯಲ್ಲಿ ಹೇಳಲಾಗಿಲ್ಲ. ಹೃದಯಾಘಾತದ ನಂತರ, ನಿಯಮಿತ ಲೈಂಗಿಕ ಚಟುವಟಿಕೆಗಳ ಕಡೆಗೆ ಗಮನ ನೀಡಬೇಕು. ಭಯಪಡಬಾರದು ಎನ್ನಲಾಗಿದೆ.