ಆರೋಗ್ಯವಾಗಿ, ಶಕ್ತಿವಂತವರಾಗಿ, ಫಿಟ್ ಆಗಿರಬೇಕು ಅಂದ್ರೆ ದೇಹವನ್ನು ಹೈಡ್ರೇಟ್ ಆಗಿಟ್ಟುಕೊಳ್ಳಿ. ನೀರು ದೇಹದ ನಿರ್ವಿಶೀಕರಣ ಪ್ರಕ್ರಿಯೆಗೆ ಸಹಾಯ ಮಾಡುವ ಮೂಲಕ ಆರೋಗ್ಯ ಸಮಸ್ಯೆಗಳನ್ನು ದೂರವಿಡುತ್ತದೆ. ಹಾಗಾದ್ರೆ ನೀವು ಅಗತ್ಯವಿರುವಷ್ಟು ನೀರನ್ನು ಕುಡಿಯುತ್ತಿದ್ದೀರೋ ಇಲ್ಲವೋ ಅನ್ನೋದನ್ನು ಕೂಡ ಚೆಕ್ ಮಾಡಿಕೊಳ್ಳಿ. ಈ ಕೆಳಗಿನ 5 ಅಂಶಗಳ ಮೂಲಕ ಅದನ್ನು ಪತ್ತೆ ಮಾಡಬಹುದು.
ಪದೇ ಪದೇ ಹಸಿವಾಗುವುದು : ನಾವು ಸಾಕಷ್ಟು ನೀರು ಕುಡಿಯದೇ ಇದ್ದಲ್ಲಿ ನಮ್ಮ ದೇಹ ನಿರ್ಜಲೀಕರಣ ಉಂಟಾಗಿ, ಅದು ತುರ್ತು ಕ್ರಮದ ಸ್ಥಿತಿಯಲ್ಲಿ ಕೆಲಸ ಮಾಡಲು ಪ್ರಾರಂಭಿಸುತ್ತದೆ. ಯಕೃತ್ತು ತನ್ನ ಗ್ಲೈಕೋಜೆನ್ ಅನ್ನು ಹಿಡಿದಿಟ್ಟುಕೊಳ್ಳುತ್ತದೆ. ಇದರಿಂದ ನಿಮಗೆ ಪದೇ ಪದೇ ಹಸಿವಾಗುತ್ತದೆ.
ಮೂತ್ರ ಹಳದಿ ಬಣ್ಣಕ್ಕೆ ತಿರುಗುವುದು : ಇದು ಡಿಹೈಡ್ರೇಶನ್ ನ ಅತ್ಯಂತ ಸಾಮಾನ್ಯ ಲಕ್ಷಣ. ದೇಹದಲ್ಲಿ ನೀರಿನ ಅಂಶ ಕಡಿಮೆಯಾದಾಗ ಕಿಡ್ನಿಯಿಂದ ಬರುವ ಎಲ್ಲಾ ತ್ಯಾಜ್ಯ ಕಡಿಮೆ ಮೂತ್ರದ ರೂಪದಲ್ಲಿ ಹೊರಬರುತ್ತದೆ. ಜೀವಾಣುಗಳ ಸಾಂದ್ರತೆಯ ಹೆಚ್ಚಳದಿಂದ ಮೂತ್ರದ ಬಣ್ಣ ಕಡು ಹಳದಿ ಬಣ್ಣಕ್ಕೆ ತಿರುಗುತ್ತದೆ.
ಉಸಿರಾಟದಲ್ಲಿ ತೊಂದರೆ : ಉಸಿರಾಟಕ್ಕೆ ಸಮಸ್ಯೆ ತಂದೊಡ್ಡಬಲ್ಲ ಬ್ಯಾಕ್ಟೀರಿಯಾಗಳನ್ನು ನಮ್ಮ ಬಾಯಿಯಲ್ಲಿರುವ ಸಲೈವಾ ತಡೆಯುವ ಕೆಲಸ ಮಾಡುತ್ತದೆ. ನೀರನ್ನು ನಾವು ಕಡಿಮೆ ಕುಡಿದಾಗ ಬಾಯಿಯಲ್ಲಿರುವ ಸಲೈವಾ ಪ್ರಮಾಣ ಕೂಡ ಕಡಿಮೆಯಾಗಿ, ಉಸಿರಾಟದ ಸಮಸ್ಯೆ ಕಾಣಿಸಿಕೊಳ್ಳುತ್ತದೆ.
ತಲೆನೋವು : ನಾವು ನೀರನ್ನು ಕಡಿಮೆ ಕುಡಿಯೋದ್ರಿಂದ ನಮ್ಮ ದೇಹದಲ್ಲಿನ ರಕ್ತ ಸಂಚಾರ ಕೂಡ ಕಡಿಮೆಯಾಗುತ್ತದೆ. ಇದರಿಂದ ನಮ್ಮ ಮೆದುಳಿಗೆ ಸಾಕಷ್ಟು ಆಮ್ಲಜನಕ ತಲುಪುವುದಿಲ್ಲ. ಪರಿಣಾಮ ತಲೆನೋವು ಹಾಗೂ ಒಂದು ರೀತಿಯ ಆಲಸ್ಯ ಕಾಣಿಸಿಕೊಳ್ಳುತ್ತದೆ.
ಆಯಾಸದ ಅನುಭವವಾಗುವುದು : ನೀವು ಕಡಿಮೆ ಪ್ರಮಾಣದಲ್ಲಿ ನೀರನ್ನು ಕುಡಿಯುವುದರಿಂದ ನಿಮ್ಮ ದೇಹ ರಕ್ತದಲ್ಲಿರುವ ನೀರನ್ನು ತೆಗೆದುಕೊಂಡು ತನ್ನ ಅಗತ್ಯ ಪೂರೈಸಿಕೊಳ್ಳುತ್ತದೆ. ಪರಿಣಾಮ ನಿಮ್ಮ ಹೃದಯ ತುಂಬಾ ವೇಗವಾಗಿ ಕೆಲಸ ಮಾಡಲಾರಂಭಿಸುತ್ತದೆ. ಅದರಿಂದ ನಿಮಗೆ ಆಯಾಸ ಕಾಣಿಸಿಕೊಳ್ಳುತ್ತದೆ.