ಧೂಮಪಾನ ಮಾಡುವವರು, ಸಸ್ಯಹಾರಿಗಳು ಮತ್ತು ಓ ಬ್ಲಡ್ ಗ್ರೂಪ್ ಹೊಂದಿದವರಿಗೆ ಕೊರೊನಾ ಸೋಂಕು ತಗುಲುವ ಸಾಧ್ಯತೆ ಕಡಿಮೆ ಇರುತ್ತದೆ ಎನ್ನುವುದು ಸರ್ವೇಯೊಂದರಲ್ಲಿ ಗೊತ್ತಾಗಿದೆ.
ಕೌನ್ಸಿಲ್ ಆಫ್ ಸೈಂಟಿಫಿಕ್ ಅಂಡ್ ಇಂಡಸ್ಟ್ರಿಯಲ್ ರಿಸರ್ಚ್(ಸಿಎಸ್ಐಆರ್) ನಡೆಸಿದ ಪ್ಯಾನ್ ಇಂಡಿಯಾ ಸಿರೋ ಸರ್ವೆ ಮಾಹಿತಿ ಪ್ರಕಾರ, ಸಾರ್ಸ್ ಕೋವ್ -2 ವೈರಸ್ ಕಾಯಿಲೆಗೆ ಕಾರಣವಾಗುವ ವೈರಸ್ ಗಳ ವಿರುದ್ಧ ಪ್ರತಿಕಾಯಗಳು ಧೂಮಪಾನಿಗಳು, ಸಸ್ಯಹಾರಿಗಳು ಮತ್ತು ಪಾಸಿಟಿವ್ ಬ್ಲಡ್ ಗ್ರೂಪ್ ಹೊಂದಿದವರ ದೇಹದಲ್ಲಿ ಹೆಚ್ಚಾಗಿ ಕಂಡುಬಂದಿದೆ.
ಪ್ರತಿಕಾಯಗಳು ಕೊರೋನಾ ವೈರಸ್ ತಡೆಯುವ ಸಾಮರ್ಥ್ಯ ಹೊಂದಿವೆ ಎಂದು ಹೇಳಲಾಗಿದ್ದು, 140 ವೈದ್ಯರು ಮತ್ತು ವಿಜ್ಞಾನಿಗಳ ತಂಡದಿಂದ ನಡೆಸಲಾದ ಅಧ್ಯಯನದಲ್ಲಿ ನಗರ ಮತ್ತು ಅರೆ ನಗರ ಪ್ರದೇಶದಲ್ಲಿನ 40ಕ್ಕೂ ಹೆಚ್ಚು ಸಿಎಸ್ಐಆರ್ ಪ್ರಯೋಗಾಲಯ ಮತ್ತು ಕೇಂದ್ರಗಳಲ್ಲಿ ಕೆಲಸ ಮಾಡುವ 10,427 ವಯಸ್ಕರು ಮತ್ತು ಅವರ ಕುಟುಂಬ ಸದಸ್ಯರನ್ನು ಅಧ್ಯಯನದಲ್ಲಿ ಒಳಪಡಿಸಲಾಗಿದೆ. ಇವರೆಲ್ಲರೂ ಸ್ವಯಂಪ್ರೇರಣೆಯಿಂದ ಅಧ್ಯಯನದಲ್ಲಿ ಭಾಗಿಯಾಗಿದ್ದರು.
ಕೊರೋನಾ ಸೋಂಕು ಉಸಿರಾಟ ಸಮಸ್ಯೆ ಉಂಟು ಮಾಡುವ ಕಾಯಿಲೆಯಾಗಿದ್ದರೂ ಮ್ಯೂಕಸ್ ಉತ್ಪಾದನೆಯನ್ನು ಹೆಚ್ಚಿಸುವಲ್ಲಿನ ಪಾತ್ರದಿಂದಾಗಿ ಧೂಮಪಾನವು ರಕ್ಷಣೆಯ ಮೊದಲ ಸಾಲಿನಂತೆ ಕಾರ್ಯನಿರ್ವಹಿಸಬಹುದು ಎಂದು ಸಮೀಕ್ಷೆಯು ಸೂಚಿಸಿದೆ. ಕೊರೋನಾ ವೈರಸ್ ಮೇಲೆ ಧೂಮಪಾನ ಮತ್ತು ನಿಕೋಟಿನ್ ನಿಂದಾಗುವ ಪರಿಣಾಮ ತಿಳಿಯಲು ಕೇಂದ್ರೀಕೃತ ಯಾಂತ್ರಿಕ ಅಧ್ಯಯನ ಅವಶ್ಯಕತೆಯಿದೆಯೆಂದು ಸರ್ವೆ ತಿಳಿಸಿದೆ.
ಅಂದಹಾಗೆ, ಧೂಮಪಾನ ಆರೋಗ್ಯಕ್ಕೆ ತೀವ್ರ ಹಾನಿಕಾರಕ. ಅದು ಅನೇಕ ಕಾಯಿಲೆಗಳಿಗೆ ಕಾರಣವಾಗುತ್ತದೆ. ಈ ಸರ್ವೆಯನ್ನು ಧೂಮಪಾನ ಮಾಡಲು ಉತ್ತೇಜನವೆಂದು ಭಾವಿಸಬಾರದು ಎಂದು ಕೂಡ ಹೇಳಲಾಗಿದೆ.
ಓ ಬ್ಲಡ್ ಗ್ರೂಪ್ ಹೊಂದಿದವರು ಸೋಂಕಿಗೆ ತುತ್ತಾಗುವ ಸಾಧ್ಯತೆ ಕಡಿಮೆಯಿದೆ ಎಂದು ಸಮೀಕ್ಷೆ ಹೇಳಿದೆ. ಆದರೆ ಬಿ ಮತ್ತು ಎಬಿ ಬ್ಲಡ್ ಗ್ರೂಪ್ ಹೊಂದಿದವರಿಗೆ ಸೋಂಕು ತಗುಲುವ ಅಪಾಯ ಹೆಚ್ಚಾಗಿರುತ್ತದೆ. ಫೈಬರ್ಸ್ ಸಮೃದ್ಧವಾಗಿರುವ ಸಸ್ಯಹಾರಿ ಆಹಾರವು ಕೊರೋನಾ ವಿರುದ್ಧ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎನ್ನಲಾಗಿದೆ.