ಬಿಸಿಲಿನ ಬೇಗೆಯಿಂದ ಚರ್ಮದ ಹೊಳಪು ಕಾಪಾಡಿಕೊಳ್ಳಲು ಎಲ್ರೂ ಸಾಕಷ್ಟು ಸರ್ಕಸ್ ಮಾಡ್ತಾರೆ. ಬಿಸಿಲಿನ ಝಳಕ್ಕೆ ಚರ್ಮ ಸುಟ್ಟು ಹೋಗದಂತೆ, ಕಪ್ಪಾಗದಂತೆ ಕಾಪಾಡಿಕೊಳ್ಳುವುದು ದೊಡ್ಡ ಸವಾಲು. ಹಾಗಂತ ಇದು ಕಷ್ಟವೇನಲ್ಲ, ಇದಕ್ಕೆ ಅತ್ಯಂತ ಸರಳ ಉಪಾಯಗಳಿವೆ.
ಇದನ್ನು ಎದುರಿಸಬೇಕು ಅಂದ್ರೆ ಹೆಚ್ಚೆ ಚ್ಚು ದ್ರವ ಪದಾರ್ಥಗಳನ್ನು ಸೇವಿಸಿ, ಚೆನ್ನಾಗಿ ನೀರು ಕುಡಿಯಿರಿ. ನಿಮ್ಮ ದೇಹ ಹೈಡ್ರೇಟ್ ಆಗಿದ್ರೆ ಚರ್ಮ ಕಾಂತಿಯುಕ್ತವಾಗಿರುತ್ತದೆ. ಬೀಚ್ ಅಥವಾ ಸಮುದ್ರ ಕಿನಾರೆಗೆ ಪ್ರವಾಸ ಹೋದಾಗ ಹೆಚ್ಹೆಚ್ಚು ಎಳನೀರನ್ನು ಕುಡಿಯುವುದು ಉತ್ತಮ. ಅದರಲ್ಲಿ ಕ್ಯಾಲೋರಿ ಕಡಿಮೆ, ನಿಮ್ಮ ಚರ್ಮಕ್ಕೆ ಬೇಕಾದ ಖನಿಜಾಂಶಗಳು, ವಿಟಮಿನ್ ಸಿ ಎಲ್ಲವೂ ಎಳನೀರಿನಲ್ಲಿದೆ.
ಅತಿಯಾದ ಎಣ್ಣೆ ಪದಾರ್ಥಗಳನ್ನು ತಿಂದಲ್ಲಿ ಮೊಡವೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ ವಿಟಮಿನ್ ಸಿ ಹೆಚ್ಚಾಗಿರುವ ಕಿತ್ತಳೆ, ನಿಂಬೆ ಹಣ್ಣು, ಕಿವಿ ಹಣ್ಣನ್ನು ಸೇವಿಸಿ. ಇದರಿಂದ ನಿಮ್ಮ ಚರ್ಮದಲ್ಲಿ ತೇವಾಂಶ ಕಾಪಾಡಿಕೊಳ್ಳಬಹುದು. ಚರ್ಮ ಸುಕ್ಕುಗಟ್ಟದಂತೆ ನೋಡಿಕೊಳ್ಳಬಹುದು.
ಸೂರ್ಯನ ಬಿಸಿಲಿನಿಂದ ಚರ್ಮ ಕಪ್ಪಾಗುವುದನ್ನು ಕೂಡ ನೀವು ತಡೆಯಬಹುದು. ಇದಕ್ಕಾಗಿ ನೈಸರ್ಗಿಕ ಆ್ಯಂಟಿ ಟ್ಯಾನ್ ಪೀಲ್ ಆಫ್ ಮಾಸ್ಕ್ ಬಳಸಿ. ಕಿತ್ತಳೆಯ ಮಾಸ್ಕ್ ಇದ್ದರೆ ಉತ್ತಮ. ಇದೊಂದು ನೈಸರ್ಗಿಕ ಕ್ಲೆನ್ಸರ್, ನಿಮ್ಮ ಚರ್ಮಕ್ಕೆ ಒಂದೇ ತೆರನಾದ ಬಣ್ಣ ನೀಡುತ್ತದೆ. ಅಷ್ಟೇ ಅಲ್ಲ ಬ್ಯಾಕ್ಟೀರಿಯಾಗಳ ವಿರುದ್ಧ ಹೋರಾಡಲು ಜೇನುತುಪ್ಪದ ಬಳಕೆ ಅತ್ಯಂತ ಉತ್ತಮ.