ವೇಗವಾಗಿ ತೂಕ ಕಡಿಮೆ ಮಾಡಿಕೊಳ್ಳಲು ಜಿಮ್ ಗೆ ಹೋಗುವ ಯೋಚನೆ ಮಾಡ್ತಿದ್ದೀರಾ…? ಜಿಮ್ ಗೆ ಹೋಗಿ ಕಸರತ್ತು ಮಾಡೋದ್ರಿಂದ ತೂಕ ಇಳಿಯುತ್ತೆ. ಆದ್ರೆ ಜೇಬಿಗೆ ಕತ್ತರಿ ಬೀಳುತ್ತೆ. ಜಿಮ್ ಬದಲು ಬೇರೆ ವಿಧಾನಗಳಿಂದಲೂ ನಿಮ್ಮ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು.
ಪ್ರತಿ ದಿನ ಜಿಮ್ ಗೆ ಹೋಗಿ ತೂಕ ಇಳಿಸಿಕೊಳ್ಳಬೇಕೆಂದೇನಿಲ್ಲ. ಓಡಾಡುವ ವೇಗವನ್ನು ಜಾಸ್ತಿ ಮಾಡಿಕೊಂಡ್ರೆ ಸಾಕು. ಸಿಕ್ಕ ಸಮಯದಲ್ಲಿ ಪಾರ್ಕ್ ಅಥವಾ ಮನೆಯಲ್ಲಿರುವ ಜಾಗದಲ್ಲಿಯೇ ವೇಗವಾಗಿ ವಾಕ್ ಮಾಡಿ. ಇದು ನಿಮ್ಮ ಶರೀರದ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
ಕಚೇರಿಗೆ ಹೋಗುವಾಗ ಲಿಫ್ಟ್ ಬದಲು ಮೆಟ್ಟಿಲನ್ನು ಬಳಸಿ. ಅಪಾರ್ಟ್ಮೆಂಟ್ ನಲ್ಲಿರುವವರು ಈ ವಿಧಾನವನ್ನು ಅನುಸರಿಸಬಹುದು. ಮೆಟ್ಟಿಲು ಹತ್ತಿ ಇಳಿಯುವುದರಿಂದ ಆರೋಗ್ಯ ವೃದ್ಧಿಯಾಗುತ್ತದೆ. ಹೃದಯಕ್ಕೂ ಒಳ್ಳೆಯದು. ಕಾಲುಗಳು ಹಾಗೂ ಸೊಂಟದ ಕೊಬ್ಬು ಕರಗುತ್ತದೆ.
ಜಿಮ್ ಗೆ ಹೋಗುವ ಬದಲು ಸ್ಫೋರ್ಟ್ಸ್ ಕ್ಲಬ್ ಗೆ ಸೇರಿಕೊಳ್ಳಿ. ಇಲ್ಲ ನಿಮ್ಮ ಸ್ನೇಹಿತರ ಜೊತೆ ಸೇರಿ ಫುಟ್ಬಾಲ್, ಬಾಸ್ಕೆಟ್ ಬಾಲ್, ಟೆನ್ನಿಸ್ ಆಡಬಹುದು. ಇದು ನಿಮ್ಮ ಕೊಬ್ಬನ್ನು ಸುಲಭವಾಗಿ ಕರಗಿಸುತ್ತದೆ.
ಕರಾಟೆ, ಮಾರ್ಷಲ್ ಆರ್ಟ್ ನಂತಹ ಸ್ವರಕ್ಷಣಾ ತರಬೇತಿ ಕ್ಲಾಸ್ ಗಳಿಗೆ ಹೋಗಿ. ಅಲ್ಲಿ ನಿಮ್ಮ ಕೊಬ್ಬು ಕರಗುವ ಜೊತೆಗೆ ರಕ್ಷಣಾ ವಿಧಾನದ ಬಗ್ಗೆ ಮಾಹಿತಿ ತಿಳಿಯುತ್ತದೆ.
ಕೊಬ್ಬು ಕರಗಿಸುವಲ್ಲಿ ಅತಿ ಮುಖ್ಯ ನೀರು. ಹೆಚ್ಚಿನ ಪ್ರಮಾಣದಲ್ಲಿ ನೀರು ಕುಡಿಯುವುದರಿಂದ ಸುಸ್ತು, ಒತ್ತಡ ಕಡಿಮೆಯಾಗುತ್ತದೆ. ಇದು ನಿಮ್ಮ ಕೊಬ್ಬು ಕರಗಿಸಲು ನೆರವಾಗುತ್ತದೆ.