ವಯಸ್ಸು ಏರುತ್ತಿದ್ದಂತೆ ಮುಖದಲ್ಲಿ ಕಾಣಿಸಿಕೊಳ್ಳೋ ನೆರಿಗೆಗಳು ಹೆಣ್ಣುಮಕ್ಕಳ ಆತಂಕಕ್ಕೆ ಕಾರಣವಾಗುತ್ತದೆ. ಕೆಲವೊಮ್ಮೆ ಅತಿಯಾದ ಮಾನಸಿಕ ಒತ್ತಡ ಹಾಗೂ ಕಡಿಮೆ ಗುಣಮಟ್ಟದ ಕಾಸ್ಮೆಟಿಕ್ಸ್ ಬಳಕೆಯಿಂದಲೂ ಮುಖದ ಚರ್ಮ ಬಿಗಿ ಕಳೆದುಕೊಂಡು ಸುಕ್ಕು, ನೆರಿಗೆಗಳು ಕಾಣಿಸಿಕೊಳ್ಳುತ್ತವೆ. ಆದರೆ ಈ ನೆರಿಗೆಗಳನ್ನು ಹೋಗಲಾಡಿಸಲು ಚಿಕಿತ್ಸೆಗಳಿಗಿಂತ ಮನೆ ಮದ್ದುಗಳೇ ಹೆಚ್ಚು ಉಪಯುಕ್ತವಾಗಿದೆ.
ಎರಡು ದೊಡ್ಡ ಚಮಚ ಕ್ಯಾರೆಟ್ ರಸಕ್ಕೆ, ಒಂದು ಚಮಚದಷ್ಟು ಸ್ವಚ್ಛವಾದ ಜೇನುತುಪ್ಪ ಸೇರಿಸಿ ಅದನ್ನು ಕಲಕಿ, ಈ ಮಿಶ್ರಣವನ್ನು ಮುಖ ಹಾಗೂ ಕತ್ತಿಗೆ ಹಚ್ಚಿಕೊಳ್ಳಬೇಕು. 15-20 ನಿಮಿಷದ ನಂತರ ಸ್ವಲ್ಪ ಬಿಸಿ ನೀರಿಗೆ ಅಡುಗೆ ಸೋಡಾ ಸೇರಿಸಿ ಹತ್ತಿಯನ್ನು ಈ ದ್ರಾವಣದಲ್ಲಿ ಅದ್ದಿ ಅದರಿಂದ ಮುಖವನ್ನು ಒರೆಸಿಕೊಳ್ಳೋದರಿಂದ ಮುಖದ ನೆರಿಗೆ ಸಮಸ್ಯೆ ಪರಿಹಾರವಾಗುತ್ತದೆ. ಇದರ ಜೊತೆಗೆ ಒರಟುತನವೂ ಕಡಿಮೆಯಾಗುತ್ತದೆ.
ಮೊಟ್ಟೆಯ ಬಿಳಿ ಲೋಳೆಯನ್ನು ಹತ್ತಿಯಲ್ಲಿ ಮುಖದ ಮೇಲೆ ನೆರಿಗೆಗೆ ಅಡ್ಡವಾಗಿ ಹಚ್ಚಿಕೊಳ್ಳಬೇಕು. ಬಳಿಕ ನಾಲ್ಕು ಗಂಟೆ ಬಿಡಬೇಕು. ಈ ವೇಳೆ ಮುಖ ಬಿಗಿದ ಸ್ಥಿತಿಯಲ್ಲಿರೋದರಿಂದ ನಗುವುದು, ಮಾತನಾಡುವುದು ಮಾಡಬಾರದು. ನಂತರ ಮಂಜುಗಡ್ಡೆ ಅಥವಾ ತಣ್ಣನೆಯ ನೀರಿಯಲ್ಲಿ ಹತ್ತಿಯನ್ನು ಅದ್ದಿ ಅದರಿಂದ ಮುಖವನ್ನು ಸ್ವಚ್ಛಗೊಳಿಸಿಕೊಳ್ಳಬೇಕು.
ತುಟಿಯ ಮೇಲ್ಬಾಗದಲ್ಲಿ ನೆರಿಗೆಗಳಿದ್ದರೆ ಗ್ಲಿಸರಿನ್, ಕೋಳಿ ಮೊಟ್ಟೆಯ ಬಿಳಿಯ ಭಾಗ ತೆಗೆದುಕೊಂಡು ಅದಕ್ಕೆ ಗುಲಾಬಿ ನೀರು ಸೇರಿಸಿ, ಕದಡಿ ಹಚ್ಚಿಕೊಂಡು 15 ನಿಮಿಷ ಬಿಟ್ಟು ತೊಳೆದುಕೊಳ್ಳಬೇಕು. ಇನ್ನು ಗ್ಲಿಸರಿನ್ ಮತ್ತು ಜೇನುತುಪ್ಪ ಬೆರೆಸಿ ನಿಯಮಿತವಾಗಿ ಹಚ್ಚಿಕೊಳ್ಳುವುದರಿಂದ ನೆರಿಗೆ ಸಮಸ್ಯೆಯನ್ನು ತಡೆಗಟ್ಟಬಹುದು.