ಬದಲಾದ ದೇಹಸ್ಥಿತಿಗೆ ಅನುಗುಣವಾಗಿ ಕೂದಲು ಉದುರುತ್ತವೆ. ಇತ್ತೀಚೆಗಂತೂ ಹೆಚ್ಚಿನವರು ಕೂದಲು ಉದುರುವುದರ ಕುರಿತೇ ಚಿಂತಿಸುತ್ತಾರೆ.
ಮಾತ್ರವಲ್ಲ, ಇದೊಂದು ಸಾಮಾನ್ಯ ಸಂಗತಿಯಾಗಿಬಿಟ್ಟಿದೆ. ದೇಹಕ್ಕೆ ಸರಿಯಾದ ಪೋಷಕಾಂಶಗಳು ಸಿಗದೇ ಇದ್ದ ಸಂದರ್ಭ, ಅತಿಯಾದ ಆಲೋಚನೆ, ತಲೆಗೆ ರಕ್ತ ಸಂಚಾರ ಸರಿಯಾಗಿ ಆಗದಿದ್ದರೆ, ಇವೇ ಮೊದಲಾದ ಸಮಸ್ಯೆಗಳಿಂದ ಕೂದಲು ಉದುರುತ್ತವೆ ಎನ್ನಲಾಗಿದೆ.
ನೀರು, ವಾತಾವರಣ, ಬಳಸುವ ಪದಾರ್ಥಗಳು ಕೂಡ ಇದಕ್ಕೆ ಕಾರಣವೆನ್ನಲಾಗುತ್ತದೆ. ಕೂದಲು ಉದುರುವ ಸಮಸ್ಯೆಗೆ ಸುಲಭ ಪರಿಹಾರ ಕೂಡ ಇಲ್ಲಿದೆ.
ಸೀಗೆಕಾಯಿ, ನೆಲ್ಲಿಕಾಯಿಯನ್ನು ಒಂದು ಲೀಟರ್ ನೀರಿನಲ್ಲಿ 2 ದಿನ ನೆನೆಸಿರಿ. ನೀರನ್ನು ಕಾಯಿಗಳ ಸಮೇತ ಒಲೆಯ ಮೇಲಿಟ್ಟು ಮಂದವಾದ ಉರಿಯಲ್ಲಿ ಅರ್ಧ ಗಂಟೆ ಕುದಿಸಿರಿ.
ತಣ್ಣಗಾದ ಬಳಿಕ ಬಾಟಲಿಗೆ ಸೋಸಿ ಇಟ್ಟುಕೊಳ್ಳಿ. ಶಾಂಪೂ ಬದಲಿಗೆ ಇದನ್ನೆ ಬಳಸುವುದರಿಂದ ನಿಮ್ಮ ಕೂದಲು ಸೊಂಪಾಗಿ ಬೆಳೆಯುತ್ತದೆ.
ಅಲ್ಲದೇ ಅರ್ಧ ಲೋಟ ಅಕ್ಕಿಯನ್ನು 2 ಲೋಟ ನೀರಿನಲ್ಲಿ ರಾತ್ರಿ ನೆನೆಸಿಟ್ಟು ಬೆಳಿಗ್ಗೆ ಅದನ್ನು ನುಣ್ಣಗೆ ರುಬ್ಬಿಕೊಂಡು ತಲೆಗೆ ಹಚ್ಚಿರಿ. ಅರ್ಧ ಗಂಟೆ ಬಳಿಕ ತೊಳೆಯಬೇಕು. ಅತಿಯಾದ ಮತ್ತು ಅನಗತ್ಯವಾದ ಚಿಂತೆಯನ್ನು ಮಾಡುವುದನ್ನು ಬಿಡಿ. ಶಾಂಪೂ, ಸೀಗೆಕಾಯಿ ಬಳಸುವಾಗಲೂ ಹೊಂದಿಕೆಯಾಗುವಂತಹುದನ್ನೇ ಬಳಸಿರಿ. ಕೂದಲು ಸ್ವಚ್ಛವಾಗಿಟ್ಟುಕೊಳ್ಳಿ
ಒಣಗಿದ ನಿಂಬೆ ಸಿಪ್ಪೆಗಳನ್ನು ಪುಡಿ ಮಾಡಿ ಅದಕ್ಕೆ ಕೊಬ್ಬರಿ ಎಣ್ಣೆ, ದಾಸವಾಳದ ಹೂವಿನ ಪುಡಿ, ನೆಲ್ಲಿ ಕಾಯಿ ಪುಡಿ ಸೇರಿಸಿ ವಾರದಲ್ಲಿ 2 ಸಲ ತಲೆಗೆ ಹಚ್ಚಿ ತಿಕ್ಕಿರಿ. ಮರುದಿನ ತಲೆ ಸ್ನಾನ ಮಾಡಿ. ನೆತ್ತಿ ತಂಪಾಗುವ ಜೊತೆಗೆ ಕೂದಲು ಉದುರುವುದು ನಿಲ್ಲುತ್ತದೆ.