ರಾತ್ರಿ ಹೊತ್ತು ತಲೆ ಸ್ನಾನ ಮಾಡಬಾರದು ಎಂದು ಹೇಳಿರುವುದನ್ನು ಕೇಳಿರುತ್ತೀರಿ. ಅದರ ಹಿಂದಿರುವ ನಿಜವಾದ ಕಾರಣವೇನು ಗೊತ್ತೇ? ಹಗಲಿಡೀ ಹೊರಗಡೆ ಓಡಾಡಿದ್ದರಿಂದ ತಲೆಯಲ್ಲಿ ಧೂಳು ಇರುತ್ತದೆ. ತಲೆ ಸ್ನಾನ ಮಾಡಿದರೆ ಆರಾಮದಾಯಕ ನಿದ್ದೆ ಪಡೆಯಬಹುದು ಎಂಬ ನಿಮ್ಮ ವಾದವೇನೋ ಸರಿ, ಅದರೆ ರಾತ್ರಿ ವೇಳೆ ಸ್ನಾನ ಮಾಡಿ ಅದು ಒಣಗುವ ತನಕ ಕಾಯದೆ ನಿದ್ದೆ ಮಾಡುತ್ತೇವೆ.
ಇದರಿಂದ ಕೂದಲು ಗಂಟು ಗಂಟಾಗುತ್ತದೆ. ಬಳಿಕ ಸಿಕ್ಕು ಬಿಡಿಸುವಾಗ ಕೂದಲು ಕಿತ್ತು ಬಂದು ಉದುರುತ್ತದೆ. ತಲೆಯ ಬುಡವೇ ಒದ್ದೆಯಾಗಿದ್ದರೆ ತಲೆಹೊಟ್ಟಿನ ಸಮಸ್ಯೆಯೂ ಕಾಡುತ್ತದೆ. ಹಾಗೆ ತುರುಬು ಕಟ್ಟಿ ಮಲಗಿದರೆ ವಾಸನೆಯೂ ಹೆಚ್ಚುತ್ತದೆ, ಕೂದಲೂ ಹೆಚ್ಚು ಉದುರುತ್ತದೆ.
ಕೂದಲನ್ನು ಒಣಗಲು ಬಿಡದಿದ್ದರೆ ಅದು ಒಂದಕ್ಕೊಂದು ಅಂಟಿಕೊಂಡು ಆಕರ್ಷಣೆ ಕಳೆದುಕೊಳ್ಳುತ್ತದೆ. ಕೂದಲು ತೆಳುವಾಗಿದ್ದರಂತೂ ಮತ್ತಷ್ಟು ಅಸಹ್ಯವಾಗಿ ಕಾಣುತ್ತದೆ. ಕೂದಲು ದಪ್ಪವಾಗಿ ಆಕರ್ಷಕವಾಗಿ ಕಾಣಬೇಕೆಂದಿದ್ದರೆ ಸ್ನಾನ ಮಾಡಿದ ಬಳಿಕ ಕೂದಲನ್ನು ಒಣಗಿಸಿ.
ಒದ್ದೆ ಕೂದಲನ್ನು ಹಾಗೆ ಬಿಟ್ಟರೆ ತುರಿಕೆ, ಕಜ್ಜಿ, ಹೇನಿನ ಸಮಸ್ಯೆ ಕಾಣಿಸಿಕೊಳ್ಳಬಹುದು. ಹಾಗಾಗಿ ನಿಮ್ಮ ಸ್ನಾನದ ಸಮಯವನ್ನು ರಾತ್ರಿಯಿಂದ ಬೆಳಿಗ್ಗೆ ಅಥವಾ ಸಂಜೆಗೆ ವರ್ಗಾಯಿಸಿ.