ಚಿಂದ್ವಾರಾ: ಸರ್ಕಾರಿ ಶಾಲೆಗಳೆಂದ್ರೆ ಬಹುತೇಕರು ಮೂಗು ಮುರಿಯೋದೇ ಜಾಸ್ತಿ. ಯಾಕಂದ್ರೆ ಶಾಲೆಗಳಲ್ಲಿನ ಶಿಕ್ಷಕರ ಕೊರತೆ, ಮೂಲಭೂತ ಸೌಕರ್ಯದ ಕೊರತೆ ಮುಂತಾದ ಕೊರತೆ ಇರುತ್ತದೆ. ಆದರೆ, ಮಧ್ಯಪ್ರದೇಶದ ಈ ಶಿಕ್ಷಕರು ಮಾಡಿರುವ ಉತ್ತಮ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಹೌದು, ಮಧ್ಯಪ್ರದೇಶದ ಚಿಂದ್ವಾರದಲ್ಲಿ ತಮ್ಮ ವೇತನದ ಒಂದು ಭಾಗವನ್ನು ಸರ್ಕಾರಿ ಶಾಲೆಗೆ ಮೀಸಲಿಟ್ಟ, ಮೂವರು ಶಿಕ್ಷಕರು ಎಲ್ಲರಿಗೂ ಮಾದರಿಯಾಗಿದ್ದಾರೆ.
ಸರ್ಕಾರಿ ಶಾಲೆಯಲ್ಲಿ ಉನ್ನತ ದರ್ಜೆಯ ಮೂಲ ಸೌಕರ್ಯಗಳನ್ನು ಸೃಷ್ಟಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ. ಚಿಂದ್ವಾರದ ಮೊಹ್ಖೇದ್ ಡೆವಲಪ್ಮೆಂಟ್ ಬ್ಲಾಕ್ನ ಉಮ್ರನಾಳದ ಬುಡಕಟ್ಟು ಗ್ರಾಮವಾದ ಘೋಘರಿಯಲ್ಲಿರುವ ಈ ಶಾಲೆ ಇದೀಗ ಎಲ್ಲರ ಹುಬ್ಬೇರಿಸುವಂತಿದೆ.
ಮೂವರು ಶಿಕ್ಷಕರು ಪ್ರತಿ ತಿಂಗಳು ತಮ್ಮ ಸಂಬಳದಿಂದ ಇಂತಿಷ್ಟು ಮೊತ್ತವನ್ನು ದೇಣಿಗೆಯಾಗಿ ನೀಡುವ ಮೂಲಕ ಈ ಸರ್ಕಾರಿ ಶಾಲೆಯ ಭವಿಷ್ಯ ಬದಲಿಸಲು ಪಣತೊಟ್ಟಿದ್ದಾರೆ.
ಮುಖ್ಯೋಪಾಧ್ಯಾಯ ಅನಿಲ್ ಕೋಠೇಕರ್ ಅವರು ತಮ್ಮ ಇಬ್ಬರು ಸಹೋದ್ಯೋಗಿಗಳಾದ ರಘುನಾಥ ತಾವಣೆ ಮತ್ತು ರಾಮು ಪವಾರ ಅವರೊಂದಿಗೆ ಶಾಲೆಯ ಬದಲಾವಣೆಗೆ ಕೈ ಜೋಡಿಸಿದ್ದಾರೆ. ವಿದ್ಯಾರ್ಥಿಗಳಿಗೆ ಆಧುನಿಕ ಸೌಲಭ್ಯಗಳನ್ನು ಒದಗಿಸುವ ಮೂಲಕ ಅಭಿಯಾನ ಶುರು ಮಾಡಿದ್ದಾರೆ.
ಕಳೆದ ಐದು ವರ್ಷಗಳಿಂದ ಈ ಶಿಕ್ಷಕರು ಶಾಲೆಯ ಮೂಲಭೂತ ಸೌಕರ್ಯಗಳ ಅಭಿವೃದ್ಧಿಗೆ, ಪ್ರತಿ ತಿಂಗಳು ತಮ್ಮ ಸಂಬಳದ ಶೇ.1 ರಷ್ಟು ಶಾಲೆಯ ಮೂಲಸೌಕರ್ಯಗಳ ಅಭಿವೃದ್ಧಿಗೆ ಖರ್ಚು ಮಾಡುತ್ತಾರೆ.
ಸ್ಮಾರ್ಟ್ ಟಿವಿ, ಪ್ರೊಜೆಕ್ಟರ್, ಧ್ವನಿವರ್ಧಕ, ಲ್ಯಾಪ್ ಟಾಪ್, ಟ್ಯಾಬ್ಲೆಟ್ ಸೇರಿದಂತೆ ಎಲ್ಲ ಸೌಲಭ್ಯಗಳನ್ನು ಹೊಂದಿರುವ ಈ ಶಾಲೆ ಹೈಟೆಕ್ ಆಗಿ ಮಾರ್ಪಟ್ಟಿದೆ.
ಯಾವುದೇ ಖಾಸಗಿ ಶಾಲೆಗೂ ಕಮ್ಮಿಯಿಲ್ಲ ಎಂಬಂತೆ ಇಲ್ಲಿ ವಿದ್ಯಾಭ್ಯಾಸ ನೀಡಲಾಗುತ್ತದೆ. ಮಕ್ಕಳಿಗೆ ಓದಲು ಉತ್ತಮ ವಾತಾವರಣ ಕಲ್ಪಿಸಬೇಕು ಎನ್ನುವುದೇ ಆ ಶಿಕ್ಷಕರ ಧ್ಯೇಯವಾಕ್ಯ.
ಡಿಜಿಟಲ್ ಮೋಡ್ನಲ್ಲಿ ಮಕ್ಕಳಿಗೆ ಶಿಕ್ಷಣವನ್ನು ಹೇಗೆ ನೀಡಲಾಗುತ್ತದೆ ಎಂಬುದನ್ನು ನೋಡುವುದಕ್ಕಾಗಿಯೇ ಸಮೀಪದ ಪ್ರದೇಶಗಳ ಶಿಕ್ಷಕರು ಈ ಶಾಲೆಗೆ ಭೇಟಿ ನೀಡುತ್ತಾರೆ. ಶಿಕ್ಷಕರು ವಿದ್ಯಾರ್ಥಿಗಳ ಸಹಕಾರದಿಂದ ಶಾಲೆಯ ಆವರಣವನ್ನು ಬದಲಾಯಿಸಿದ್ದಾರೆ
ಘೋಘರಿ ಪ್ರೌಢಶಾಲೆಯಲ್ಲಿ ಸ್ಮಾರ್ಟ್ ತರಗತಿಗಳನ್ನು ನಡೆಸಿದ್ದರಲ್ಲಿ ಶಿಕ್ಷಕರ ಶ್ರಮವಿದೆ. ಮಕ್ಕಳು ಈಗ ಉತ್ತಮ ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಪ್ರಯೋಗಗಳು ಬೇರೆಡೆ ಕೂಡ ಆಗಬೇಕು ಅನ್ನೋದು ಜಿಲ್ಲಾ ಶಿಕ್ಷಣಾಧಿಕಾರಿ ಅರವಿಂದ ಚೋರಗಡೆ ಅವರ ಅಂಬೋಣ.
ವಿದ್ಯಾರ್ಥಿಗಳು ಕೂಡ ಈ ಬದಲಾವಣೆಯಿಂದ ಫುಲ್ ಖುಷಿಯಾಗಿದ್ದಾರೆ. ಶಾಲೆಯ ಬದಲಾದ ವಾತಾವರಣ, ವಿದ್ಯಾರ್ಥಿಗಳಲ್ಲಿ ಓದುವ ಹುಮ್ಮಸ್ಸನ್ನು ಮತ್ತಷ್ಟು ಹೆಚ್ಚಿಸಿದೆ. ಜಿಲ್ಲೆಯ ಖಾಸಗಿ ಶಾಲೆಗಳಿಗೆ ಈ ಸರ್ಕಾರಿ ಶಾಲೆ ಪೈಪೋಟಿ ನೀಡುತ್ತಿರುವುದು ನಿಜಕ್ಕೂ ಸಂತೋಷದ ವಿಷಯ.