ಟೊಮೆಟೊ ಬೆಲೆ ಗಗನಕ್ಕೇರಿದೆ. ದರ ದುಬಾರಿಯಾಗಿರುವಾಗ ಎಲ್ಲರಿಗೂ ಟೊಮೆಟೋ ಕೊಳ್ಳುವುದು ಅಸಾಧ್ಯ. ಈ ಕಾರಣಕ್ಕಾಗಿ ಅನೇಕರು ಟೊಮೆಟೋ ತಿನ್ನುವುದೇ ಇಲ್ಲ. ಆದರೆ ಟೊಮೆಟೋ ನಮ್ಮ ನಿತ್ಯದ ಆಹಾರದ ಅವಿಭಾಜ್ಯ ಅಂಗ.
ಟೊಮೆಟೊ ಇಲ್ಲದೆ ಅನೇಕ ಭಕ್ಷ್ಯಗಳು ರುಚಿ ಕಳೆದುಕೊಳ್ಳುತ್ತವೆ. ಹಾಗಾಗಿ ಬೆಲೆ ಕಡಿಮೆಯಿದ್ದಾಗಲೇ ಟೊಮೆಟೋವನ್ನು ಖರೀದಿಸಿ ಅವುಗಳನ್ನು ಸಂಗ್ರಹಿಸಿ ಇಟ್ಟುಕೊಳ್ಳಬೇಕು. ಅವು ಕೊಳೆತು ಹಾಳಾಗದಂತೆ ಸಂಗ್ರಹಿಸುವುದು ಬಹಳ ಮುಖ್ಯ. ದೀರ್ಘಕಾಲದವರೆಗೆ ಟೊಮೆಟೋಗಳನ್ನು ಕೆಡದಂತೆ ಇಡುವುದು ಹೇಗೆ ಅನ್ನೋದನ್ನು ನೋಡೋಣ.
ಟೊಮೆಟೊಗಳನ್ನು ಫ್ರೀಜರ್‌ನಲ್ಲಿ ಇರಿಸಿ
ದೀರ್ಘಕಾಲದವರೆಗೆ ಟೊಮೆಟೊಗಳನ್ನು ಸಂಗ್ರಹಿಸಲು ಬಯಸಿದರೆ ಮೊದಲು ಟೊಮೆಟೊದ ಮೇಲಿನ ಭಾಗವನ್ನು ಕತ್ತರಿಸಿ ಅದನ್ನು ಪ್ರತ್ಯೇಕಿಸಿ. ಸುಮಾರು 10 ನಿಮಿಷಗಳ ಕಾಲ ನೀರಿನಲ್ಲಿ ಟೊಮೆಟೊಗಳನ್ನು ಕುದಿಸಿ. ಅವು ಸ್ವಲ್ಪ ತಣ್ಣಗಾದ ಬಳಿಕ ಸಿಪ್ಪೆಗಳನ್ನು ತೆಗೆದುಹಾಕಿ ಮತ್ತು ಪ್ಯೂರಿ ಮಾಡಿ. ಅದನ್ನು ಸುಮಾರು ಒಂದು ವಾರದವರೆಗೆ ಫ್ರೀಜರ್‌ನಲ್ಲಿ ಸಂಗ್ರಹಿಸಬಹುದು.
ಟೊಮೆಟೋಗಳನ್ನು ಬಿಸಿಲಿನಲ್ಲಿ ಒಣಗಿಸಿ
ಟೊಮೆಟೊವನ್ನು ದೀರ್ಘಕಾಲದವರೆಗೆ ಸಂಗ್ರಹಿಸಲು ಬಯಸಿದರೆ ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿ ಇಡಬಹುದು. ಟೊಮೆಟೊಗಳನ್ನು ತೊಳೆದು ಎರಡು ಭಾಗಗಳಾಗಿ ಕತ್ತರಿಸಿ, ಮೇಲೆ ಉಪ್ಪು ಸಿಂಪಡಿಸಿ. ನಂತರ ಅವುಗಳನ್ನು ಸುಮಾರು 2 ವಾರಗಳ ಕಾಲ ಬಿಸಿಲಿನಲ್ಲಿ ಒಣಗಿಸಿ. ರಾತ್ರಿಯಲ್ಲಿ ಟೊಮೆಟೊಗಳನ್ನು ಒಳಗೆ ಇರಿಸಿ. ಟೊಮ್ಯಾಟೊ ಸಂಪೂರ್ಣವಾಗಿ ಒಣಗಿದ ನಂತರ ಅವುಗಳನ್ನು ಕಂಟೇನರ್‌ನಲ್ಲಿ ಸಂಗ್ರಹಿಸಿ.
ಟೊಮೆಟೊ ಪುಡಿ ಮಾಡಿ
ಟೊಮೆಟೋಗಳನ್ನು ಕೆಡದಂತೆ ಪುಡಿ ಮಾಡಿ ಕೂಡ ಇಡಬಹುದು. ಟೊಮೆಟೊಗಳನ್ನು ಚೆನ್ನಾಗಿ ತೊಳೆಯಿರಿ, ಸಣ್ಣ ತುಂಡುಗಳಾಗಿ ಕತ್ತರಿಸಿ. 1-2 ವಾರಗಳವರೆಗೆ ಬಿಸಿಲಿನಲ್ಲಿ ಒಣಗಿಸಿ. ನಂತರ ಅವುಗಳನ್ನು ಡ್ರೈ ರೋಸ್ಟ್ ಮಾಡಿ. ಚೆನ್ನಾಗಿ ಪುಡಿ ಮಾಡಿ ಗಾಜಿನ ಜಾರ್‌ನಲ್ಲಿ ತುಂಬಿಸಿಡಿ. ಜಾರ್ ಒದ್ದೆಯಿರಬಾರದು ಎಂಬುದನ್ನು ನೆನಪಿನಲ್ಲಿಡಿ.