ಚಳಿಗಾಲ ತನ್ನ ರೌದ್ರಾವತಾರವನ್ನು ತೋರಿಸಿದೆ. ಚಳಿ ಹೆಚ್ಚಿದ ಪರಿಣಾಮ ವಾಕಿಂಗ್ ಹೋಗುವವರ ಸಂಖ್ಯೆ ಕಡಿಮೆಯಾಗಿದೆ. ಬೆಳಿಗ್ಗೆ ಏಳುವುದಕ್ಕೂ ಒಂದು ರೀತಿಯ ಆಲಸ್ಯ ಕಾಡುತ್ತದೆ.
ಈ ಸಮಯದಲ್ಲಿ ಬೆಚ್ಚಗಿನ ರುಚಿಕರ ಆಹಾರವನ್ನು ಸೇವಿಸುವ ಮೂಲಕ ನೀವು ವೈದ್ಯರಿಂದ ದೂರವಿರಬಹುದು. ಚೆನ್ನಾಗಿ ಬೇಯಿಸಿದ, ಬೆಚ್ಚಗಿನ, ಎಣ್ಣೆಯಂಶ ಬೆರೆತ, ಸಾಮಾನ್ಯ ಖಾರದ ವಸ್ತುಗಳನ್ನು ಸೇವಿಸುವುದು ಬಹಳ ಒಳ್ಳೆಯದು. ಫ್ರಿಜ್ ಆಹಾರ ಹಾಗೂ ಪಾನೀಯಗಳಿಂದ ದೂರವಿದ್ದು ಬೆಚ್ಚಗಿನ ಪಾನೀಯಗಳನ್ನೇ ಆದ್ಯತೆಯಿಂದ ಕುಡಿದರೆ ಕಫ ಸಮಸ್ಯೆ ಹತ್ತಿರವೂ ಸುಳಿಯದು.
ಮೂಲಂಗಿ ಬೀಟ್ ರೂಟ್ ನೊಂದಿಗೆ ನೀರುಳ್ಳಿ ಪಾಲಕ್ ಸೊಪ್ಪುಗಳನ್ನು ಸೇವಿಸಿ. ಆದರೆ ಹಸಿ ತರಕಾರಿಗಳನ್ನು ಈ ಅವಧಿಯಲ್ಲಿ ತಿನ್ನುವುದು ಅಷ್ಟು ಒಳ್ಳೆಯದಲ್ಲ. ಅಡುಗೆ ಮನೆಯಲ್ಲಿ ಬೆಳ್ಳುಳ್ಳಿ, ಶುಂಠಿ, ಕಾಳು ಮೆಣಸು ಹಾಗೂ ಅರಶಿನವನ್ನು ಒಂದಿಲ್ಲೊಂದು ರೂಪದಲ್ಲಿ ಮರೆಯದೆ ಬಳಸಿ.
ಕೆಂಪಕ್ಕಿ ಅನ್ನ ಅಥವಾ ಚಪಾತಿ ಸೇವಿಸಿ. ಬೇಳೆಗೆ ತುಪ್ಪ ಹಾಗೂ ಲಿಂಬೆರಸ ಹಿಂಡಿ ತೋವೆ ತಯಾರಿಸಿದರೆ ಮಕ್ಕಳೂ ಇಷ್ಟಪಟ್ಟು ಸವಿಯುತ್ತಾರೆ. ಇದು ಆರೋಗ್ಯಕ್ಕೂ ಒಳ್ಳೆಯದು. ಮೊಟ್ಟೆ, ತಾಜಾ ಮಾಂಸಾಹಾರಗಳನ್ನು ಸೇವಿಸಬಹುದು.