ಬೆಂಗಳೂರು: ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ. ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಈ ವರದಿ ಮಾರ್ಗದರ್ಶಿಯಾಗಲಿ ಎಂದು ಜಾತಿ ಗಣತಿ ವರದಿ ಸ್ವೀಕರಿಸಿದ ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ಮೊದಲ ಬಾರಿಗೆ ನಾನು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ರಾಜ್ಯದ ಪ್ರತಿಯೊಂದು ಸಮುದಾಯದ ಜನರ ಸಾಮಾಜಿಕ, ಶೈಕ್ಷಣಿಕ ಪರಿಸ್ಥಿತಿಯ ಪೂರ್ಣ ಮಾಹಿತಿಯನ್ನು ಸಂಗ್ರಹಿಸುವ ಉದ್ದೇಶದಿಂದ ರಾಜ್ಯ ಹಿಂದುಳಿದ ವರ್ಗಗಳ ಆಯೋಗಕ್ಕೆ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ” ನಡೆಸುವಂತೆ ಆದೇಶಿಸಿದ್ದೆ. ನಂತರ ಬಂದ ಸರ್ಕಾರಗಳು ವರದಿ ಸ್ವೀಕರಿಸಲು ಹಿಂದೇಟು ಹಾಕಿದ್ದರಿಂದ ಸಮೀಕ್ಷೆ ಒಂದು ದಶಕಗಳಷ್ಟು ಹಳೆಯದಾಗಿ, ಸ್ವೀಕಾರವಾಗದೆ ಉಳಿದಿತ್ತು. ಎರಡನೇ ಬಾರಿಗೆ ನಾನು ಮುಖ್ಯಮಂತ್ರಿಯಾದ ನಂತರ ಇನ್ನಷ್ಟು ವೈಜ್ಞಾನಿಕವಾಗಿ ಮಾಹಿತಿ ಕಲೆಹಾಕಲು ಮರುಗಣತಿಗೆ ಆದೇಶ ನೀಡಿದ್ದೆ. ಇಂದು ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯ ವರದಿಯನ್ನು ಅತ್ಯಂತ ಸಂತೋಷದಿಂದ ಸ್ವೀಕರಿಸಿದ್ದೇನೆ ಎಂದು ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಸಾಮಾಜಿಕ ನ್ಯಾಯದ ಅನುಷ್ಠಾನಕ್ಕೆ ಈ ವರದಿಯು ಮಾರ್ಗದರ್ಶಿಯಾಗಲಿ ಎಂದು ಆಶಿಸುತ್ತೇನೆ ಎಂದು ತಿಳಿಸಿದ್ದಾರೆ.
ಬುಧವಾರ ಸಂಜೆ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸಿದ್ಧಪಡಿಸಿದ “ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯ ವರದಿ”ಯನ್ನು ಸ್ವೀಕರಿಸಿದರು.
ಸಚಿವರಾದ ಶಿವರಾಜ್ ತಂಗಡಗಿ, ಹೆಚ್.ಸಿ.ಮಹದೇವಪ್ಪ, ಎಂ.ಸಿ.ಸುಧಾಕರ್, ಸತೀಶ್ ಜಾರಕಿಹೊಳಿ, ಚಲುರಾಯಸ್ವಾಮಿ, ಶಾಸಕರಾದ ಕೋನರೆಡ್ಡಿ, ನರೇಂದ್ರಸ್ವಾಮಿ, ಮುಖ್ಯಮಂತ್ರಿಗಳ ಕಾನೂನು ಸಲಹೆಗಾರ ಪೊನ್ನಣ್ಣ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಮಧುಸೂಧನ್ ಆರ್ ನಾಯಕ್, ಸದಸ್ಯರುಗಳಾದ ಶಿವಣ್ಣಗೌಡ, ಚಂದ್ರಪ್ಪ ಯಾದವ, ಪ್ರತಿಭಾ ಕುಳಾಯಿ, ಡಾ.ಸಿ.ಎಂ.ಕುಂದಗೋಳ, ಡಾ.ಜಿ.ಎನ್.ಶ್ರೀಕಂಠಯ್ಯ ಹಾಗೂ ಸದಸ್ಯ ಕಾರ್ಯದರ್ಶಿ ದಯಾನಂದ್, ಆಡಳಿತಾತ್ಮಕ ಕಾರ್ಯದರ್ಶಿ ಊರ್ಮಿಳಾ ಬಿ, ಆಯೋಗದ ವಿಶೇಷ ಸಲಹೆಗಾರರು ಡಿ.ಎನ್.ನಾಯಕ್ ಮತ್ತು ಇತರೆ ತಜ್ಞರು ಈ ವೇಳೆ ಉಪಸ್ಥಿತರಿದ್ದರು.

