ನಿನ್ನೆ ( ಮೇ 27 ) ನ್ಯೂ ಚಂಡೀಗಢ್ನ ಮುಲ್ಲಾನ್ಪುರ್ನ ಮಹಾರಾಜ ಯದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ 2026ರ ಎಲಿಮಿನೇಟರ್ ಪಂದ್ಯದಲ್ಲಿ ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ರಾಜಸ್ಥಾನ್ ರಾಯಲ್ಸ್ 47 ರನ್ಗಳ ಗೆಲುವನ್ನು ದಾಖಲಿಸುವ ಮೂಲಕ ಕ್ವಾಲಿಫಯರ್ 2ಗೆ ಎಂಟ್ರಿ ಕೊಟ್ಟಿದ್ದು, ಸೋತ ಹೈದರಾಬಾದ್ ಟೂರ್ನಿಯಿಂದ ಎಲಿಮಿನೇಟ್ ಆಯಿತು.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ ವೈಭವ್ ಸೂರ್ಯವಂಶಿ ಹಾಗೂ ಧ್ರುವ್ ಜುರೆಲ್ ಅಬ್ಬರದ ಆಟದ ನೆರವಿನಿಂದ 20 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 243 ರನ್ ಕಲೆಹಾಕಿ ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 244 ರನ್ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ವಿಫಲವಾದ ಸನ್ರೈಸರ್ಸ್ ಹೈದರಾಬಾದ್ 19.2 ಓವರ್ಗಳಲ್ಲಿ 196 ರನ್ಗಳಿಗೆ ಆಲ್ಔಟ್ ಆಯಿತು.
ಸನ್ ರೈಸರ್ಸ್ ತಂಡದ ಬಲಿಷ್ಠ ಬ್ಯಾಟಿಂಗ್ ಪಡೆಯನ್ನು ರಾಜಸ್ಥಾನ್ ಬೌಲರ್ಗಳು ಕಟ್ಟಿಹಾಕಿದರೆ, ಮೊದಲು ಬ್ಯಾಟಿಂಗ್ ಮಾಡಿದ ತಂಡದ ಪರ ಅಬ್ಬರಿಸಿ ಬೊಬ್ಬಿರಿದ ವೈಭವ್ ಸೂರ್ಯವಂಶಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದರು. ಕೇವಲ 29 ಎಸೆತಗಳಲ್ಲಿ 5 ಬೌಂಡರಿ ಹಾಗೂ 12 ಸಿಕ್ಸರ್ ಸಹಿತ 97 ರನ್ ಚಚ್ಚಿದ ವೈಭವ್ ಸೂರ್ಯವಂಶಿ ಐಪಿಎಲ್ ವೇಗದ ಶತಕ ಬಾರಿಸುವ ಅವಕಾಶ ಕೈತಪ್ಪಿಸಿಕೊಂಡರು.
ಇನ್ನು ವೈಭವ್ ಆಡಿದ ಈ ಅಬ್ಬರದ ಇನ್ನಿಂಗ್ಸ್ಗೆ ಕ್ರಿಕೆಟ್ ಜಗತ್ತೇ ಬೆರಗಾಯಿತು. ಮೊದಲ ಓವರ್ನ ಕೊನೆಯ ಎಸೆತದಲ್ಲಿ ನಾಯಕ ಪ್ಯಾಟ್ ಕಮಿನ್ಸ್ಗೆ ಸಿಕ್ಸರ್ ಬಾರಿಸುವ ಮೂಲಕ ಅಬ್ಬರ ಆರಂಭಿಸಿದ ವೈಭವ್ ಇರುವವರೆಗೂ ಬೌಂಡರಿಗಳ ಸುರಿಮಳೆಗೈದು ಸನ್ ರೈಸರ್ಸ್ ಹೈದರಾಬಾದ್ ಆಟಗಾರರು ಹೈರಾಣಾಗುವಂತೆ ಮಾಡಿದರು.
ವೈಭವ್ ಅಬ್ಬರ ಕಂಡು ಸ್ವತಃ ಸನ್ ರೈಸರ್ಸ್ ತಂಡದ ಓವರ್ ಕಾವ್ಯ ಮಾರನ್ ಸಪ್ಪೆ ಮುಖ ಹೊತ್ತು ಕುಳಿತುಬಿಟ್ಟರು. ಎಲ್ಲ ಪಂದ್ಯಗಳಲ್ಲೂ ಲವಲವಿಕೆಯಿಂದ ತಂಡಕ್ಕೆ ಬೆಂಬಲ ನೀಡುತ್ತಾ ಓಡಾಡುತ್ತಿದ್ದ ಕಾವ್ಯ ಮಾರನ್ ನಿನ್ನೆಯ ಪಂದ್ಯದಲ್ಲಿ ಮಾತ್ರ ಒಮ್ಮೆಯೂ ಎದ್ದು ಸಂಭ್ರಮಿಸದ ಮಟ್ಟಕ್ಕೆ ವೈಭವ್ ಇನ್ನಿಂಗ್ಸ್ ಆಕೆಯನ್ನು ಸೈಲೆಂಟ್ ಮಾಡಿಬಿಟ್ಟಿತು.

