HomeKarnatakaರೈತರೇ ದಯವಿಟ್ಟು ಹಠ ನಿಲ್ಲಿಸಿ; ಕಾನೂನು ಕೈಗೆತ್ತಿಕೊಳ್ಳಬೇಡಿ: ಕಬ್ಬುಬೆಳೆಗಾರರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ರೈತರೇ ದಯವಿಟ್ಟು ಹಠ ನಿಲ್ಲಿಸಿ; ಕಾನೂನು ಕೈಗೆತ್ತಿಕೊಳ್ಳಬೇಡಿ: ಕಬ್ಬುಬೆಳೆಗಾರರಿಗೆ ಸಿಎಂ ಡಿ.ಕೆ.ಶಿವಕುಮಾರ್ ಮನವಿ

ಬೆಂಗಳೂರು: ಕೇಂದ್ರ ಸರ್ಕಾರ ಕಬ್ಬು ಬೆಳೆಯುವ ರೈತರನ್ನು ಬದುಕಿಸುವುದಕ್ಕಾದರೂ ಸಕ್ಕರೆ ಕನಿಷ್ಠ ಮಾರಾಟ ದರ (ಎಂಎಸ್ ಪಿ)ವನ್ನು 50 ರೂ.ಗೆ ಹೆಚ್ಚಿಸಬೇಕು. ಹಾಗಾದರೆ ಮಾತ್ರ ರೈತರಿಗೆ ಒಳ್ಳೆಯ ಬೆಲೆ ನೀಡಲು ಸಾಧ್ಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಬೆಂಗಳೂರಿನಲ್ಲಿ ಮಾತನಾಡಿದ ಸಿಎಂ ಡಿ.ಕೆ.ಶಿವಕುಮಾರ್, ಕಬ್ಬು ಬೇಳೆಗಾರರ ಹೋರಾಟದ ವಿಚಾರವಾಗಿ, ನಾನು ರೈತರಿಗೆ ಮನವಿ ಮಾಡುವುದು ಇಷ್ಟೇ. ದಯವಿಟ್ಟು, ಪ್ರತಿಭಟನೆ ಮಾಡಬೇಡಿ. ಆವತ್ತು ಮಾತು ಕತೆ ಏನಾಗಿತ್ತೋ ಅದನ್ನು ಪಾಲಿಸಿ. ಕೇಂದ್ರ ಸರ್ಕಾರ ಬೆಲೆ ಏರಿಕೆ ಮಾಡಿದಾಗ ನಿಮಗೆ ಕಾರ್ಖಾನೆಗಳಿಂದ ಹಣ ಕೊಡಿಸುವ ಜವಾಬ್ದಾರಿ ನಮ್ಮದು. ಈ ವಿಚಾರವಾಗಿಯೇ ನಿನ್ನೆ ಪ್ರಧಾನಿಗಳಿಗೆ ನಾನು ಪತ್ರ ಬರೆದಿದ್ದೇನೆ. ಇವತ್ತು ನಾಳೆಯಲ್ಲಿ ಕೇಂದ್ರದ ಮಂತ್ರಿಗಳನ್ನು ಸಂಪರ್ಕ ಮಾಡಿ ರೈತರ ಪರವಾಗಿ ಮನವಿ ಮಾಡುತ್ತೇನೆ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರೈತರೇ ನೀವು ಮಾಡುತ್ತಿರುವ ಹಠವನ್ನು ನಿಲ್ಲಿಸಿ. ಇದರಿಂದ ಕಬ್ಬು ಬೆಳೆಗಾರರು ಬದುಕಿರುವಾಗಲೇ ಸಾಯುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಕಬ್ಬು ಒಣಗಿದರೆ ರಸ ಕಡಿಮೆಯಾಗುತ್ತದೆ. ನೀವು ಕಾನೂನನ್ನು ಕೈಗೆ ತೆಗೆದುಕೊಳ್ಳುವುದಕ್ಕೆ ಹೋಗಬೇಡಿ. ಕಾರ್ಖಾನೆಗಳು ಕಬ್ಬನ್ನು ಅರೆಯಲಿ. ಕೇಂದ್ರ ಸರ್ಕಾರ ಸೆಪ್ಟೆಂಬರ್ ನಲ್ಲೇ ಕಬ್ಬು ಅರೆಸಿ ಎಂದು ಹೇಳಿತ್ತು. ನಾನು ರೈತರನ್ನು ಕರೆದು ಕೇಳಿದಾಗ, ಈಗ ಕಬ್ಬಿನಲ್ಲಿ ರಸ ಕಡಿಮೆ ಇದೆ ಅಂತ ಹೇಳಿದರು. ಈಗ ಕಬ್ಬು ಅರೆಯಲು ಸರಿಯಾದ ಕಾಲ. ರೈತರಿಗೆ ತೊಂದರೆಯಾಗಬಾರದು ಎಂಬುದು ನಮ್ಮ ಉದ್ದೇಶ ಎಂದು ಹೇಳಿದರು.

ಕಬ್ಬು ಬೆಳೆಗಾರರೊಂದಿಗೆ ಪ್ರಾಮಾಣಿಕವಾಗಿ ಮಾತುಕತೆ ನಡೆಸಿದ್ದೇನೆ. ಆಗ ಕೇಂದ್ರ ಸರ್ಕಾರದ ಸೂಕ್ತ ಬೆಲೆ ನಿಗದಿ ಮಾಡುತ್ತದೆ ಎಂದು ಕೇಂದ್ರ ಸಚಿವರಾದ ಜೋಶಿ ಅವರು ಮಾತುಕೊಟ್ಟಿದ್ದರಂತೆ. ಕೇಂದ್ರ ಸರ್ಕಾರ ಏನು ತೀರ್ಮಾನ ಕೈಗೊಳ್ಳುತ್ತದೋ ಅದನ್ನು ಪಾಲಿಸಬೇಕು ಎಂದು ರೈತ ಮುಖಂಡರ ಮಧ್ಯದಲ್ಲಿ ಕುಳಿತು ಕಾರ್ಖಾನೆ ಮಾಲೀಕರೊಂದಿಗೆ ಮಾತುಕತೆ ನಡೆಸಿದ್ದೆವು. ಕೇಂದ್ರ ಸರ್ಕಾರ ನೇಮಿಸಿದ್ದ ಸಮಿತಿ ಸದಸ್ಯರಿಗೂ ಈ ವಿಚಾರ ಹೇಳಿದ್ದೇವೆ ವಿವರಣೆ ನೀಡಿದರು.

ಹಾಲಿನ ದರ 12ರೂಪಾಯಿ ಹೆಚ್ಚಿಸಿ ಎಂದು ಬೇಡಿಕೆ ಇಟ್ಟಿದ್ದರು. ಬೇರೆ ರಾಜ್ಯಗಳಲ್ಲಿ ಬೆಲೆ ಬಹಳ ಜಾಸ್ತಿ ಇದೆ. ಇಲ್ಲಿ ಉತ್ಪಾದನೆಯಾಗುತ್ತಿದ್ದ ಹಾಲು ಅಲ್ಲಿಗೆ ಹೋಗುತ್ತಿತ್ತು. ರಾಜ್ಯದಲ್ಲಿ ಬರಗಾಲ ಇರುವುದರಿಂದ ಹಾಲಿ ಉತ್ಪಾದನೆ ಕಡಿಮೆ ಆಗಿದೆ. ಹಾಲಿನ ಉತ್ಪಾದನೆ ಜಾಸ್ತಿಯಾಗಬೇಕಾದರೆ ಗೋವಿಗೆ ಉತ್ತಮ ಆಹಾರ ಕೊಡಬೇಕು. ಆಹಾರ ಕೊಡಬೇಕು ಅಂದರೆ ರೈತರ ಬಳಿ ದುಡ್ಡು ಇರಬೇಕು. ನಾವು ರೈತರನ್ನು, ಗೋ ಮಾತೆಯನ್ನು ಉಳಿಸಬೇಕು. ಆ ದೃಷ್ಟಿಯಿಂದ ಬಹಳ ಆಲೋಚನೆ ಮಾಡಿ. ಈ ಬೆಲೆ ಏರಿಕೆ ತೀರ್ಮಾನ ಮಾಡಿದ್ದೇವೆ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಉತ್ತರಾಖಂಡದ ಚಮೋಲಿ ಜಿಲ್ಲೆಯ ಜೋಶಿಮಠ-ಬದರಿನಾಥ್ ಮಾರ್ಗದ ‘ಹಾಥಿ ಪರ್ವತ’ ಪ್ರದೇಶದ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತ ನಿಜಕ್ಕೂ ಗಾಬರಿ ಮೂಡಿಸಿದೆ. ಉತ್ತರಾಖಂಡ ಹಾಗೂ ದೆಹಲಿ ಸರ್ಕಾರಗಳೊಂದಿಗೆ ಮುಂದಿನ ಕ್ರಮಗಳ ಬಗ್ಗೆ ಮಾತನಾಡಿದ್ದೇನೆ. ಮೃತರ ಪಾರ್ತಿವ ಶರೀರ ತರಿಸುವ ಬಗ್ಗೆ ಎಲ್ಲ ರೀತಿಯ ವ್ಯವಸ್ಥೆಯನ್ನು ಮಾಡಲಾಗಿದೆ ಎಂದರು.

ದೇವರ ದರ್ಶನಕ್ಕೆ ಹೋದವರಿಗೆ ಈ ರೀತಿ ಆಗಿರುವುದು ನಿಜಕ್ಕೂ ದುರದೃಷ್ಟಕರ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ. ಪ್ರವಾಸಿಗರು ಮುಂದೆ ಬಹಳ ಎಚ್ಚರಿಕೆಯಿಂದ ಇರಬೇಕು. ಕೇದರನಾಥದಲ್ಲಿರುವ ನಮ್ಮ ಕರ್ನಾಟಕದ ಸ್ವಾಮಿಗಳೊಂದಿಗೆ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದರು.

ಬಳಿಕ ಬೆಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಶ್ರೀಮತಿ ಇಂದಿರಾಗಾಂಧಿ ಅವರ ಪುಣ್ಯಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, “ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಮನೆ ಬಾಗಿಲಿಗೆ ಬರುವುದಿಲ್ಲ. ನೀವೇ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು ಎಂದು ಇಂದಿರಾ ಗಾಂಧಿ ಅವರು ಹೇಳಿದ್ದಾರೆ. ಅವರ ಮಾರ್ಗದರ್ಶನದಂತೆ ನೀವುಗಳು ಜನರ ಮಧ್ಯೇ ಹೋಗಿ ಕೆಲಸ ಮಾಡಬೇಕು, ಹೋರಾಟ ಮಾಡಬೇಕು. ಇಂದಿರಾ ಗಾಂಧಿ ಅವರ ಹೇಳಿಕೆಗಳ ಕುರಿತು ಶ್ರೀಮತಿ ಸೋನಿಯಾ ಗಾಂಧಿ ಅವರು ಒಂದು ಪುಸ್ತಕ ಬರೆದಿದ್ದು, ನಾನು ಅದನ್ನು ಕನ್ನಡಕ್ಕೆ ಅನುವಾದ ಮಾಡಿಸಿದ್ದೇನೆ. ಆ ಪುಸ್ತಕಗಳನ್ನು ಕಾಂಗ್ರೆಸ್ ಕಚೇರಿಗೆ ಕಳುಹಿಸಿಕೊಡುತ್ತೇನೆ. ನೀವೆಲ್ಲರೂ 50 ರೂ. ಪಾವತಿಸಿ ಆ ಪುಸ್ತಕವನ್ನು ಖರೀದಿ ಮಾಡಿ ಓದಿ. ಈ ಪುಸ್ತಕ ಉಚಿತವಾಗಿ ನೀಡಬಹುದಾಗಿತ್ತು. ಆದರೆ ಹಣ ಕೊಟ್ಟು ಖರೀದಿ ಮಾಡಿದಾಗ ಅದಕ್ಕೆ ಬೆಲೆ ಬರುತ್ತದೆ. ಹೀಗಾಗಿ ಅದಕ್ಕೆ ದರ ನಿಗದಿ ಮಾಡಲಾಗಿದೆ” ಎಂದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular