ಬೆಂಗಳೂರು: ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡಲು ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಘೋಷಣೆ ಮಾಡಲಾದ ಯೋಜನೆಗೆ ಗಾಂಧಿ ಜಯಂತಿ ದಿನ ಅಕ್ಟೋಬರ್ 2 ರಂದು ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸ್ವಯಂಸೇವಾ ಸಂಸ್ಥೆಗಳ ಒಕ್ಕೂಟ, ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ, ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಹಾಗೂ ಸುಮಂಗಲಿ ಸೇವಾಶ್ರಮ ಸಹಯೋಗದಲ್ಲಿ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಸ್ವಯಂಸೇವಾ ಸಂಸ್ಥೆಗಳ ಸಮಾವೇಶ ಉದ್ಘಾಟಿಸಿ ಮಾತನಾಡಿದ ಅವರು, ಅಕ್ಟೋಬರ್ 2ರಿಂದ ಸ್ತ್ರೀಶಕ್ತಿ ನೆರವಿನ ಯೋಜನೆ ಆರಂಭಿಸಲಾಗುವುದು ಎಂದು ಹೇಳಿದ್ದಾರೆ.
ಸ್ತ್ರೀಶಕ್ತಿ ಸಂಘಗಳಿಗೆ ಆರ್ಥಿಕ ನೆರವು ನೀಡುವ ಯೋಜನೆಯಲ್ಲಿ ಪ್ರಮುಖವಾಗಿ 1.5 ಲಕ್ಷ ರೂಪಾಯಿ ನೆರವು ನೀಡಲಾಗುತ್ತದೆ. ಯಂತ್ರೋಪಕರಣ, ಪ್ರಾಜೆಕ್ಟ್ ಗಳು, ಉತ್ಪನ್ನಗಳ ಮಾರುಕಟ್ಟೆ ವ್ಯವಸ್ಥೆ ಮಾಡಲಾಗುತ್ತದೆ. ಅಮೆಜಾನ್ ನಂತಹ ವೆಬ್ಸೈಟ್ ಗಳಲ್ಲಿ ಉತ್ಪನ್ನಗಳ ಮಾರಾಟಕ್ಕೆ ವ್ಯವಸ್ಥೆ ಮಾಡಲಾಗುವುದು. ಪ್ರಾಯೋಗಿಕವಾಗಿ ಯೋಜನೆ ಆರಂಭಿಸಲಾಗಿದ್ದು, ಒಂದು ಸ್ತ್ರೀಶಕ್ತಿ ಸಂಘ ತಿಂಗಳಿಗೆ 50 ಲಕ್ಷ ರೂಪಾಯಿ ವಹಿವಾಟು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.