ಫ್ಲೈಟ್ ಡಿಲೇ ಇನ್ಶುರೆನ್ಸ್ ವ್ಯವಸ್ಥೆಯಲ್ಲಿರುವ ಇತಿಮಿತಿಗಳ ಲಾಭ ಪಡೆದುಕೊಂಡು, ವಿಳಂಬವಾಗಿ ಟೇಕಾಫ್ ಆಗಬಲ್ಲ ಹಾಗೂ ಲ್ಯಾಂಡ್ ಆಗಬಲ್ಲ ವಿಮಾನಗಳ ಟಿಕೆಟ್ ಗಳನ್ನು ಬೇಕಂತಲೇ ಖರೀದಿ ಮಾಡುವ ಮೂಲಕ ಚೀನಾದ ಮಹಿಳೆಯೊಬ್ಬರು 3.2 ಕೋಟಿ ರೂ.ಗಳಷ್ಟು ಸಂಪಾದನೆ ಮಾಡಿದ್ದಾರೆ.
ಲೀ ಹೆಸರಿನ ಈ 45 ವರ್ಷದ ಮಹಿಳೆ 2015-2019 ರ ಅವಧಿಯಲ್ಲಿ ನೂರಾರು ವಿಮಾನಗಳ ಟಿಕೆಟ್ ಬುಕ್ ಮಾಡಿದ್ದಾರೆ. ಇವುಗಳೆಲ್ಲವೂ ಬರೀ ಫ್ಲೈಟ್ ಡಿಲೇ ಇನ್ಶುರೆನ್ಸ್ ದುಡ್ಡನ್ನು ಪಡೆಯುವ ಉದ್ದೇಶದಿಂದ ಬುಕ್ ಮಾಡಿದ್ದಾಗಿವೆ.
ಸ್ಥಳೀಯ ವಾತಾವರಣದ ಮುನ್ಸೂಚನೆಯನ್ನು ವಿಶ್ಲೇಷಣೆ ಮಾಡಿ, ಆನ್ಲೈನ್ ರಿವ್ಯೂಗಳನ್ನು ನೋಡಿಕೊಂಡು ಯಾವ ವಿಮಾನಗಳು ಕ್ಯಾನ್ಸಲ್ ಆಗುವ ಅಥವಾ ಡಿಲೇ ಆಗುವ ಸಾಧ್ಯತೆಗಳಿವೆ ಎಂಬುದನ್ನು ಅಂದಾಜು ಮಾಡಿ 900ಕ್ಕೂ ಹೆಚ್ಚು ಫ್ಲೈಟ್ ಗಳನ್ನು ಐದು ವರ್ಷಗಳ ಅವಧಿಯಲ್ಲಿ ಬುಕ್ ಮಾಡಿದ್ದಾರೆ ಈಕೆ. ಬುಕಿಂಗ್ ಸಂದರ್ಭದಲ್ಲಿ 20ಕ್ಕೂ ಹೆಚ್ಚು ಮಂದಿಯ ಐಡೆಂಟಿಟಿಗಳನ್ನು ಈ ಮಹಿಳೆ ಬಳಸಿಕೊಂಡಿದ್ದಾರೆ. ಸದ್ಯ ಈಕೆ ಈಗ ನಂಜಿಂಗ್ ಪೊಲೀಸರ ವಶದಲ್ಲಿದ್ದಾಳೆ.