ನವದೆಹಲಿ: ನೌಕರರ ಭವಿಷ್ಯ ನಿಧಿ(ಇಪಿಎಫ್) ವಾಪಸ್ ಪಡೆದವರು ಈ ಬಾರಿಯ (2019-20ನೇ ವರ್ಷದ) ಐಟಿ ರಿಟರ್ನ್ಸ್ ಸಂದರ್ಭದಲ್ಲಿ ಅದರ ವರದಿ ನೀಡಿದರೆ ಷರತ್ತುಗಳಿಗೊಳಪಟ್ಟು ಕೆಲವು ವಿನಾಯಿತಿಗಳು ಪಡೆಯಲಿದ್ದಾರೆ.
ರೆಕಾಗ್ನೈಸ್ಡ್ ಪ್ರಾವಿಡೆಂಡ್ ಫಂಡ್ (ಆರ್.ಪಿ.ಎಫ್.)ಖಾತೆಯ ನೌಕರ ನಿರಂತರವಾಗಿ ಒಂದು ವೃತ್ತಿಯಲ್ಲಿ ಐದು ವರ್ಷ ಪೂರೈಸಿದ್ದಲ್ಲಿ ಪಿಎಫ್ ಹಿಂತೆಗೆತಕ್ಕೆ ಆದಾಯ ತೆರಿಗೆ ವಿನಾಯಿತಿ ದೊರೆಯಲಿದೆ. ಐದು ವರ್ಷವಾಗದೇ ಇದ್ದಲ್ಲಿ ನೌಕರ ಅನಾರೋಗ್ಯ ಕಾರಣದಿಂದ ನೌಕರಿ ಬಿಟ್ಟಲ್ಲಿ ಮಾತ್ರ ವಿನಾಯಿತಿ ದೊರೆಯಲಿದೆ.
ಕೋವಿಡ್ 19 ಕಾರಣದಿಂದ ಆರ್ಥಿಕ ಸಂಕಷ್ಟಕ್ಕೆ ಒಳಗಾದವರು ಪಿಎಫ್ ಖಾತೆಯಿಂದ ಹಣ ತೆಗೆಯಲು ಅವಕಾಶವಿದೆ. ಖಾತೆಯಲ್ಲಿರುವ ಒಟ್ಟಾರೆ ಹಣದ ಶೇ. 75 ಅಥವಾ ಮೂರು ತಿಂಗಳ ಬೇಸಿಕ್ ವೇತನ ಮತ್ತು ಅಗತ್ಯ ಅಲೋವೆನ್ಸ್ ಮೊತ್ತ ಸೇರಿಸಿದಲ್ಲಿ ಯಾವುದು ಕಡಿಮೆಯೋ ಅಷ್ಟು ಹಣವನ್ನು ಹಿಂಪಡೆಯಬಹುದಾಗಿದೆ.
ಉದಾಹರಣೆಗೆ ನಿಮ್ಮ ಪಿಎಫ್ ಖಾತೆಯಲ್ಲಿ 1 ಲಕ್ಷ ರೂ. ಹಣವಿದೆ ಎಂದಾದರೆ, ನಿಮ್ಮ ಮಾಸಿಕ ಮೂಲ ವೇತನ ಹಾಗೂ ಅಗತ್ಯ ಭತ್ಯೆ ಸೇರಿ 22 ಸಾವಿರವಾಗುತ್ತದೆ ಎಂದಾದಲ್ಲಿ ನೀವು 66 ಸಾವಿರ ಹಣವನ್ನು ಪಿಎಫ್ ಖಾತೆಯಿಂದ ಹಿಂತೆಗೆಯಬಹುದಾಗಿದೆ.
ಕೋವಿಡ್ ಪರಿಹಾರಕ್ಕಾಗಿ ಹಣ ವಾಪಸ್ ಪಡೆದಿದ್ದಲ್ಲಿ ಉದ್ಯೋಗಿ ನಿರಂತರ ಐದು ವರ್ಷ ಪೂರೈಸದೇ ಇದ್ದರೂ ಆತನಿಗೆ ತೆರಿಗೆ ವಿನಾಯಿತಿ ದೊರೆಯಲಿದೆ ಎಂದು ಸಲಹೆಗಾರರು ಅಭಿಪ್ರಾಯಪಟ್ಟಿದ್ದಾರೆ.