ಕೋಲಾರ ಜಿಲ್ಲೆಯ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಫೋನ್ ಉತ್ಪಾದಕ ಕಂಪನಿ ವಿಸ್ಟ್ರಾನ್ ಕಾರ್ಪೊರೇಷನ್ ಹೆಚ್ಚುವರಿಯಾಗಿ 900 ಕೋಟಿ ರೂಪಾಯಿ ಬಂಡವಾಳ ಹೂಡಿಕೆಗೆ ತೀರ್ಮಾನ ಕೈಗೊಂಡಿದೆ. ಇದರಿಂದ 8 ಸಾವಿರ ಜನರಿಗೆ ಉದ್ಯೋಗ ಸೃಷ್ಟಿಯಾಗುವ ನಿರೀಕ್ಷೆ ಇದೆ.
ವಿಸ್ಟ್ರಾನ್ ಕಂಪನಿ ಲಾಕ್ ಡೌನ್ ನಡುವೆಯೂ ಸಾವಿರಾರು ಜನರಿಗೆ ಉದ್ಯೋಗ ನೀಡಿದ್ದು, ಇದೀಗ ಹೆಚ್ಚುವರಿಯಾಗಿ 900 ಕೋಟಿ ಬಂಡವಾಳ ಹೂಡಲಿದೆ. ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ 3 ಸಾವಿರ ಕೋಟಿ ರೂಪಾಯಿ ಬಂಡವಾಳದಲ್ಲಿ ಕಂಪನಿ ಕಾರ್ಯಾರಂಭ ಮಾಡಿದ್ದು, ಮತ್ತೊಂದು ಘಟಕ ನಿರ್ಮಾಣಕ್ಕೆ ಹೆಚ್ಚುವರಿಯಾಗಿ 900 ಕೋಟಿ ಹೂಡಿಕೆ ಮಾಡಲಿದೆ.
ಮೊದಲ ಹಂತದಲ್ಲಿ 5 ಸಾವಿರ ಮತ್ತು ಎರಡನೇ ಹಂತದಲ್ಲಿ 5 ಸಾವಿರ ಜನರಿಗೆ ಉದ್ಯೋಗ ಅವಕಾಶ ಕಲ್ಪಿಸಲಾಗುವುದು. ಈಗಾಗಲೇ ಐಫೋನ್ ಮಾದರಿ ಉತ್ಪಾದನೆ ಪ್ರಾಯೋಗಿಕವಾಗಿ ಆರಂಭವಾಗಿದ್ದು, ಸ್ಮಾರ್ಟ್ಫೋನ್, ಇಂಟರ್ನೆಟ್ ಉಪಕರಣ, ಜೈವಿಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಉಪಕರಣಗಳನ್ನು ಉತ್ಪಾದಿಸಲಾಗುವುದು. ಐಟಿಐ, ಡಿಪ್ಲೋಮಾ ಸೇರಿದಂತೆ ವಿವಿಧ ವಿದ್ಯಾರ್ಹತೆ ಹೊಂದಿದ ಸುಮಾರು 18 ಸಾವಿರ ಮಂದಿಗೆ ಉದ್ಯೋಗ ಅವಕಾಶ ಸಿಗಲಿದೆ ಎಂದು ಹೇಳಲಾಗಿದೆ.