ಸಾಮಾಜಿಕ ಜಾಲತಾಣಗಳು ಸದ್ಯ ಭಾರತೀಯರ ಅಚ್ಚುಮೆಚ್ಚಿನ ಸ್ಥಳವಾಗಿದೆ. ಲಾಕ್ ಡೌನ್ ಸಂದರ್ಭದಲ್ಲಿ ಜನರು ಸಾಮಾಜಿಕ ಜಾಲತಾಣದ ಮೂಲಕ ಸಮಯ ಕಳೆಯುತ್ತಿದ್ದಾರೆ. ಆದ್ರೆ ಫೇಸ್ಬುಕ್, ಟ್ವಿಟರ್, ಇನ್ಸ್ಟ್ರಾಗ್ರಾಮ್ ಬಳಕೆದಾರರಿಗೆ ಬೇಸರದ ಸಂಗತಿ ಸಿಗುವ ಸಾಧ್ಯತೆಯಿದೆ. ದೇಶದಲ್ಲಿರುವ ಸಾಮಾಜಿಕ ಜಾಲತಾಣಗಳಿಗೆ ಕೆಲವು ನಿಯಮಗಳನ್ನು ಪಾಲನೆ ಮಾಡುವಂತೆ ಕೇಂದ್ರ ಸರ್ಕಾರ ಸೂಚನೆ ನೀಡಿತ್ತು. ಅದಕ್ಕಾಗಿ ಮೂರು ತಿಂಗಳ ಅವಕಾಶ ನೀಡಿತ್ತು. ಮೇ 26ರಂದು ಸರ್ಕಾರದ ಗಡುವು ಕೊನೆಗೊಳ್ಳಲಿದೆ.
ನಾಳೆಯಿಂದ ಫೇಸ್ಬುಕ್, ಇನ್ಸ್ಟ್ರಾಗ್ರಾಮ್, ಟ್ವಿಟರ್ ಕೆಲಸ ನಿಲ್ಲಿಸಲಿದೆಯೇ ಎಂಬ ಪ್ರಶ್ನೆ ಈಗ ಉದ್ಭವವಾಗಿದೆ. ಭಾರತ ಸರ್ಕಾರದ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಫೆಬ್ರವರಿ 25, 2021 ರಂದು ಎಲ್ಲಾ ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಹೊಸ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಸಮಯವನ್ನು ನೀಡಿತ್ತು. ಸಾಮಾಜಿಕ ಮಾಧ್ಯಮ ಕಂಪನಿಗಳಿಗೆ ಭಾರತದಲ್ಲಿ ಕಂಪ್ಲಾಯನ್ಸ್ ಅಧಿಕಾರಿ ಮತ್ತು ನೋಡಲ್ ಅಧಿಕಾರಿಗಳನ್ನು ನೇಮಿಸಲು ಸೂಚನೆ ನೀಡಲಾಗಿತ್ತು. ಅವರೆಲ್ಲರೂ ಭಾರತದಲ್ಲಿರಬೇಕು ಎಂಬುದು ಸೇರಿದಂತೆ ಕೆಲ ನಿಯಮಗಳನ್ನು ಸೂಚಿಸಲಾಗಿತ್ತು.
ಆದ್ರೆ ಕೂ ಕಂಪನಿ ಹೊರತುಪಡಿಸಿ ಮತ್ತ್ಯಾವ ಕಂಪನಿಯೂ ಇದನ್ನು ಪಾಲಿಸಿಲ್ಲ. ಸಾಮಾಜಿಕ ಜಾಲತಾಣ ಬಳಕೆದಾರರಿಗೆ ಯಾರಿಗೆ ದೂರು ನೀಡಬೇಕು, ಸಮಸ್ಯೆ ಎಲ್ಲಿ ಬಗೆಹರಿಸಬೇಕೆಂಬುದು ತಿಳಿದಿಲ್ಲ. ಕೆಲ ಕಂಪನಿಗಳು ಇದಕ್ಕೆ 6 ತಿಂಗಳ ಅವಕಾಶ ಕೇಳಿದ್ದರೆ ಮತ್ತೆ ಕೆಲ ಕಂಪನಿಗಳು ವಿದೇಶದಲ್ಲಿರುವ ಮುಖ್ಯ ಕಚೇರಿಯಿಂದ ವರದಿಗಾಗಿ ಕಾಯ್ತಿವೆ.