ಆದಾಯ ತೆರಿಗೆ ವ್ಯಾಪ್ತಿಯಿಂದ ಕೆಲವೊಂದು ಆದಾಯಗಳಿಗೆ ವಿನಾಯಿತಿ ನೀಡಲಾಗಿದ್ದರೂ ಸಹ ತೆರಿಗೆದಾರರು ತಮ್ಮ ರಿಟರ್ನ್ಸ್ನಲ್ಲಿ ಅಂಥ ಆದಾಯಗಳ ಮೂಲಗಳನ್ನು ಗೊತ್ತುಪಡಿಸಬೇಕಾಗುತ್ತದೆ. ಇಲ್ಲವಾದಲ್ಲಿ ಭವಿಷ್ಯದಲ್ಲಿ ತೆರಿಗೆರಹಿತ ಆದಾಯದ ಮೂಲವನ್ನು ವಿವರಿಸುವುದು ತೆರಿಗೆದಾರರಿಗೆ ತ್ರಾಸವಾಗಬಹುದಾಗಿದೆ.
“ನಾನಾ ಮೂಲಗಳಿಂದ ಫಾರಂ 26ಎಎಸ್ ವಿವರಗಳನ್ನು ಆದಾಯ ತೆರಿಗೆ ಇಲಾಖೆ ಪಡೆದುಕೊಳ್ಳುವ ಕಾರಣ ಈ ನಡೆ ಅತ್ಯಂತ ಮಹತ್ವ ಪಡೆದಿದೆ. ಒಂದು ವೇಳೆ ನೀವು ತೆರಿಗೆ ರಹಿತವಾದ ಮೂಲದಿಂದ ಭಾರೀ ಮೌಲ್ಯದ ವಹಿವಾಟು ನಡೆಸಿದ್ದರೆ ಆ ವಿಷಯವನ್ನು ಆದಾಯ ತೆರಿಗೆ ಇಲಾಖೆಗೆ ವರದಿ ಮಾಡಲಾಗುವುದು. ತೆರಿಗೆ ರಿಟರ್ನ್ಸ್ನಲ್ಲಿ ಈ ಮಾಹಿತಿ ಕೊಟ್ಟಿಲ್ಲವಾದಲ್ಲಿ, ಇಂಥ ವಹಿವಾಟಿನ ಹಿಂದೆ ಇರುವ ಹಣದ ಮೂಲದ ಬಗ್ಗೆ ತೆರಿಗೆ ಇಲಾಖೆ ನಿಮ್ಮಲ್ಲಿ ಲೆಕ್ಕ ಕೇಳಬಹುದು” ಎಂದು ತೆರಿಗೆ ತಜ್ಞ ಸುಧೀರ್ ಕೌಶಿಕ್ ತಿಳಿಸಿದ್ದಾರೆ.
ಪ್ರಾವಿಡೆಂಟ್ ಫಂಡ್ಗಳು, ಸ್ಕಾಲರ್ಶಿಪ್, ಪಿಂಚಣಿ, ಅಂಚೆ ಕಚೇರಿಯ ಉಳಿತಾಯದ ಮೇಲೆ ಬರುವ ಬಡ್ಡಿ (ವಾರ್ಷಿಕ 3,500 ರೂ.ಗಳವರೆಗೆ) ಸೇರಿದಂತೆ ಅನೇಕ ರೀತಿಯ ಆದಾಯಗಳನ್ನು ತೆರಿಗೆ ವ್ಯಾಪ್ತಿಯಿಂದ ಹೊರಗೆ ಇಡಲಾಗಿದೆ.
ಹೊರ ದೇಶದಿಂದ ಬರುವ ಆದಾಯದ ಪ್ರಕರಣದಲ್ಲಿ: ಭಾರತದೊಂದಿಗೆ ಆದಾಯ ತೆರಿಗೆ ಸಂಬಂಧಿ ಒಪ್ಪಂದಗಳನ್ನು ಮಾಡಿಕೊಂಡಿರುವ ದೇಶಗಳಿಂದ ಬರುವ ಆದಾಯದ ವಿವರವನ್ನೂ ಸಹ ರಿಟರ್ನ್ಸ್ನಲ್ಲಿ ನಮೂದಿಸಬೇಕಾಗುತ್ತದೆ.
ವಿವರಣೆ ಇಲ್ಲದೇ ಇರುವ ಆದಾಯ ಕಂಡು ಬಂದಲ್ಲಿ, ಆ ಆದಾಯದ 60% ಮೊತ್ತ ಹಾಗೂ ದಂಡವನ್ನೂ ಸಹ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಸುತ್ತಾರೆ ಬೆಂಗಳೂರು ಮೂಲದ ತೆರಿಗೆ ತಜ್ಞ ಪ್ರಕಾಶ್ ಹೆಗಡೆ.