ಕಾರ್ಪೋರೇಟ್ ಜೀವನ ಅನೇಕರನ್ನು ಬೇಸರಗೊಳಿಸುತ್ತಿದೆ. ಅತಿಯಾದ ಕೆಲಸ, ಒತ್ತಡದಿಂದ ಬಳಲುತ್ತಿರುವ ಜನರು ಸ್ವಂತ ಉದ್ಯೋಗ ಶುರು ಮಾಡುವ ತಯಾರಿ ನಡೆಸುತ್ತಿದ್ದಾರೆ. ವರದಿಯೊಂದರ ಪ್ರಕಾರ ಮುಂಬೈ ಒಂದರಲ್ಲೇ ಕಳೆದ ಒಂದು ವರ್ಷದಲ್ಲಿ ವೈಯಕ್ತಿಕ ಸಾಲ ಪಡೆದವರಲ್ಲಿ ಶೇಕಡಾ 25ರಷ್ಟು ಜನರು ಸ್ವಂತ ಉದ್ಯೋಗ ಶುರು ಮಾಡ್ತಿದ್ದಾರೆ. ಸ್ವಂತ ಉದ್ಯೋಗ ಶುರು ಮಾಡುವ ಮೊದಲು ಅನೇಕ ವಿಷ್ಯಗಳ ಬಗ್ಗೆ ಗಮನ ನೀಡಬೇಕಾಗುತ್ತದೆ.
ಸ್ವಂತ ಉದ್ಯೋಗ ಶುರು ಮಾಡಿದ ದಿನದಿಂದ ಕೆಲಸ ಹಾಗೂ ವೈಯಕ್ತಿಕ ಜೀವನದ ಮಧ್ಯೆಯಿರುವ ಗೆರೆ ಮಸುಕಾಗಲು ಶುರುವಾಗುತ್ತದೆ. ಉದ್ಯಮಿಯಾದ್ಮೇಲೆ ರಜೆ ಮುಗಿದಂತೆ. ಇಡೀ ದಿನ ಕೆಲಸದ ಬಗ್ಗೆ ಚಿಂತಿಸಲು ಶುರು ಮಾಡ್ತಿರಿ. ಎಲ್ಲೇ ಇರಲಿ, ಗ್ರಾಹಕರಿಗೆ ತೃಪ್ತಿ ನೀಡುವುದು ಹೇಗೆ ಎನ್ನುವ ಬಗ್ಗೆ ಆಲೋಚಿಸಲು ಶುರು ಮಾಡುತ್ತೀರಿ.
ಕಚೇರಿಯಲ್ಲಿದ್ದರೆ ಅನೇಕ ರೀತಿಯ ಸೌಲಭ್ಯ ಸಿಗುತ್ತದೆ. ಕಾರ್ಪೋರೇಟ್ ಕಚೇರಿಯಲ್ಲಿರುವ ಸೌಲಭ್ಯವೆಲ್ಲ ನಿಮ್ಮ ಸ್ವಂತ ಉದ್ಯೋಗ ಶುರು ಮಾಡಿದ ಮೇಲೆ ಸಿಗುವುದಿಲ್ಲ. ಕಾಫಿ ಯಂತ್ರದಿಂದ ಹಿಡಿದು ದೊಡ್ಡ ಕಟ್ಟಡ ಕೂಡ ಇರುವುದಿಲ್ಲ. ಸಣ್ಣ ರೂಮಿನಲ್ಲಿ ಕೆಲಸ ಶುರು ಮಾಡಬೇಕಾಗುತ್ತದೆ. ಯಾವುದೇ ಯಂತ್ರ ಹಾಳಾದರೂ ನೀವೇ ಸರಿ ಮಾಡಬೇಕು. ಕಚೇರಿಗೆ ಬೇಕಾದ ಪ್ರತಿಯೊಂದು ವಸ್ತುವನ್ನೂ ನೀವೇ ತರಬೇಕು. ಅಗತ್ಯ ಬಿದ್ದಾಗ ಕಚೇರಿ ಸ್ವಚ್ಛಗೊಳಿಸುವ ಕೆಲಸವನ್ನೂ ಮಾಡಬೇಕಾಗುತ್ತದೆ.
ಯಾವುದೇ ಕೆಲಸ ಹೇಳಿದಷ್ಟು, ನೋಡಿದಷ್ಟು ಸುಲಭವಲ್ಲ. ಕ್ಲೈಂಟ್ ನಿಭಾಯಿಸುವುದು ಸುಲಭವಲ್ಲ. ಬಾಸ್ ಮೇಲೆ ಕೋಪಗೊಂಡು ಸ್ವಂತ ವ್ಯವಹಾರ ಶುರು ಮಾಡುವ ಪ್ಲಾನ್ ಮಾಡಿದ್ದರೆ ಕೆಲಸ ಬಿಡುವ ಮೊದಲೆ ಎಲ್ಲವನ್ನೂ ಆಲೋಚನೆ ಮಾಡಿ. ಕಚೇರಿಗೆ ಹೋಗಿ ಕೆಲಸ ಮಾಡುವ ಸಂದರ್ಭದಲ್ಲಿ ಅಲ್ಲಿನ ಹಿರಿಯರ ಮಾರ್ಗದರ್ಶನದಲ್ಲಿ ನೀವು ಕೆಲಸ ಕಲಿಯುತ್ತೀರಿ. ಆದ್ರೆ ಇಲ್ಲಿ ನಿಮ್ಮ ಕೆಲಸದ ಮಧ್ಯೆ ಮೂಗು ತೂರಿಸುವವರ ಸಂಖ್ಯೆ ಹೆಚ್ಚಿರುತ್ತದೆ. ಯಾವುದು ಸರಿ ಎಂಬುದನ್ನು ನಿರ್ಧರಿಸುವ ಆತ್ಮವಿಶ್ವಾಸ ನಿಮಗಿರಬೇಕು.
ಕಚೇರಿಯಲ್ಲಿ ಕೆಲಸ ಮಾಡುವಾಗ ಪ್ರತಿ ತಿಂಗಳು ಸಂಬಳ ಸಿಗುವ ಭರವಸೆಯಿರುತ್ತದೆ. ಆದ್ರೆ ಉದ್ಯೋಗದಲ್ಲಿ ಪ್ರತಿ ತಿಂಗಳು ಸಂಬಳ ಸಿಗುತ್ತೆ ಎಂದು ಹೇಳಲು ಸಾಧ್ಯವಿಲ್ಲ. ಕಠಿಣ ಪರಿಶ್ರಮ ಅಗತ್ಯವಿದೆ. ನಿಮ್ಮ ಕೈಕೆಳಗೆ ಉದ್ಯೋಗಿಗಳನ್ನು ಆರಂಭದಲ್ಲಿಯೇ ನೇಮಿಸಿಕೊಂಡಿದ್ದರೆ ಅವರಿಗೆ ಸಂಬಳ ನೀಡಬೇಕಾಗುತ್ತದೆ. ಎಲ್ಲವನ್ನೂ ಸಂಭಾಳಿಸಲು ನೀವು ಆರ್ಥಿಕವಾಗಿ ಸದೃಢರಾಗಿರಬೇಕಾಗುತ್ತದೆ.
ಉದ್ಯೋಗ ಶುರು ಮಾಡಿದ ಕೆಲವೇ ದಿನಗಳಲ್ಲಿ ಉತ್ತಮ ಲಾಭ ಬರಬೇಕೆಂದು ಎಲ್ಲರೂ ಬಯಸ್ತಾರೆ. ಎಲ್ಲ ಉದ್ಯಮದಲ್ಲಿ ಇದು ಸಾಧ್ಯವಿಲ್ಲ. ಅನೇಕ ವರ್ಷಗಳ ಕಾಲ ತಾಳ್ಮೆಯಿಂದ ಇರಬೇಕಾಗುತ್ತದೆ. ಈ ಸಂದರ್ಭದಲ್ಲಿ ಆರ್ಥಿಕ ಸಮಸ್ಯೆ ಎದುರಾಗಿ ಮಾರುಕಟ್ಟೆಯಿಂದ ಹೊರಬರಬೇಕಾಗಬಹುದು. ಬೇರೆಯವರ ಸಲಹೆ ಮೇರೆಗೆ ಇನ್ನೊಂದು ಉದ್ಯೋಗ ಶುರು ಮಾಡುವವರಿದ್ದಾರೆ. ಆದ್ರೆ ಅದೂ ಕೈಗೂಡದೆ ಹೋದಲ್ಲಿ ನಿರಾಸೆ ಆವರಿಸುತ್ತದೆ.
ಹಾಗಾಗಿ ಕೆಲಸ ಬಿಟ್ಟು ಸ್ವಂತ ಉದ್ಯೋಗ ಶುರು ಮಾಡುವ ಮೊದಲೇ ಈ ಎಲ್ಲದರ ಬಗ್ಗೆ ಆಲೋಚನೆ ಮಾಡಬೇಕಾಗುತ್ತದೆ. ಎಲ್ಲವನ್ನೂ ಎದುರಿಸುವ ಧೈರ್ಯ, ಆತ್ಮವಿಶ್ವಾಸವಿದ್ದಲ್ಲಿ ಮಾತ್ರ ಸ್ವಂತ ಉದ್ಯೋಗಕ್ಕೆ ಕೈಹಾಕಿ. ಈಗಿನ ಕೆಲಸ ಕಿರಿಕಿರಿಯಾದ್ರೆ ಸ್ವಲ್ಪ ದಿನ ರಜೆ ತೆಗೆದುಕೊಳ್ಳಿ. ಉತ್ತಮ ಸಂಬಳ ಬಿಟ್ಟು, ಸ್ವಂತ ಉದ್ಯೋಗದ ಹುಚ್ಚಿಗೆ ಬಿದ್ದು, ಹಗಲು ಕಂಡ ಬಾವಿಯಲ್ಲಿ ರಾತ್ರಿ ಬೀಳಬೇಡಿ.