ಭಾರತದ ಕಾರು ಮಾರುಕಟ್ಟೆಯ ಗಾತ್ರ ಅಂಕೆ ಮೀರಿ ಬೆಳೆಯುತ್ತಿರುವ ಬೆನ್ನಲ್ಲೇ ಕಾರು ಖರೀದಿಗೆ ವಿದೇಶೀ ಹಾಗೂ ಸ್ವದೇಶೀ ಬ್ರಾಂಡ್‌ಗಳ ಬಹಳಷ್ಟು ಆಯ್ಕೆಗಳು ನಮ್ಮ ಮುಂದೆ ಇಂದು ಇವೆ.
ಕಾರುಗಳ ಮಾಡೆಲ್‌ಗಳನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ನಾವು ಬರೀ ಪಾಶ್ಚಾತ್ಯ ಹೆಸರುಗಳನ್ನೇ ಕೇಳುತ್ತೇವೆ. ಲೌರಾ, ಫಾರ್ಚೂನರ್, ಆಕ್ಟೇವಿಯಾ, ವೆಂಟೋ, ಜಾಝ್, ಪೋಲೋ, ಸಿಟಿ, ಎಂಡೇವರ್, ಸಿವಿಕ್, ಆಕ್ಸೆಂಟ್…… ಹೀಗೆ ಬರೀ ಪಾಶ್ಚಾತ್ಯ ಹೆಸರುಗಳ ಕಾರುಗಳೇ ಇವೆಯೇ ಹೊರತು ಶೋಭಾ ಅಥವಾ ಸಂಜಯ್ ಎಂಬ ಹೆಸರುಗಳು ಇಲ್ಲ.
ನಮ್ಮದೇ ಪ್ರೀತಿಯ ಮಾರುತಿ 800 ಸಹ ದೇಶೀ ಹೆಸರನ್ನು ಹೊಂದಿಲ್ಲ. ಪಾಕಿಸ್ತಾನದಲ್ಲಿ ಮಾರಾಟವಾಗುವ ಇದೇ ಮಾಡೆಲ್ ಅನ್ನು ಸುಜುಕಿ ಮೆಹ್ರಾನ್ ಎಂದು ಮಾರಾಟ ಮಾಡಲಾಗುತ್ತಿದೆ. ಟೊಯೋಟಾ ಇನ್ನೊವಾ ಎಂದು ಇಲ್ಲಿ ಮಾರಾಟವಾಗುವ ಎಂಯುವಿ ಆಗ್ನೇಯ ಏಷ್ಯಾದ ಮಾರುಕಟ್ಟೆಗಳಲ್ಲಿ ಕಿಜಾಂಗ್ ಇನ್ನೊವಾ ಎಂಬ ಹೆಸರಿನಲ್ಲಿ ಬಿಕರಿಯಾಗುತ್ತಿದೆ.
ಬ್ರಿಟನ್‌ನ ಮಾರಿಸ್ ಗ್ಯಾರೇಜ್ ಅನ್ನು ಖರೀದಿ ಮಾಡಿರುವ ಚೀನಾದ ಎಸ್‌ಐಎಸಿ ಆಟೋ ಸಮೂಹ ಭಾರತದಲ್ಲಿ ತನ್ನ ಕಾರನ್ನು ಹೆಕ್ಟರ್ ಹೆಸರಿನಲ್ಲಿ ಸೇಲ್ ಮಾಡುತ್ತಿದ್ದರೆ ಚೀನಾದಲ್ಲಿ ಬಜೌನ್ 530 ಹೆಸರಿನಲ್ಲಿ ಮಾರುತ್ತಿದೆ. ಚೀನೀ ಭಾಷೆಯಲ್ಲಿ ಬಜೌನ್ ಎಂದರೆ ಮೌಲ್ಯಯುತ ಕುದುರೆ ಎಂದರ್ಥ.
ಭಾರತದಲ್ಲೇ ಉತ್ಪಾದನೆಯಾದ ಕಾರೊಂದಕ್ಕೆ ’ನ್ಯಾನೋ’ ಎಂದು ಹೆಸರಿಡಲಾಗಿದೆ. ಈ ಕಾರಿಗೆ ’ಶೂನ್ಯ’ ಎಂದು ಹೆಸರಿಟ್ಟಿದ್ದರೆ ಇನ್ನಷ್ಟು ಆಪ್ತವೆನಿಸುತ್ತಿತ್ತೇನೋ.
ನೇರ ಪ್ರಸಾರದಲ್ಲಿದ್ದ ಪತ್ರಕರ್ತೆ ಮೈಕ್ ಕಿತ್ತುಕೊಂಡು ಶ್ವಾನ ಪರಾರಿ
ಆರ್ಥಿಕ ಉದಾರೀಕರಣದ ಹಿಂದಿನ ದಿನಗಳಲ್ಲಿ ಆಟೋಮೊಬೈಲ್ ಕಂಪನಿಗಳು ತಮ್ಮ ಉತ್ಪನ್ನಗಳಿಗೆ ಭಾರತೀಯ ಹೆಸರುಗಳನ್ನು ಇಡುತ್ತಿದ್ದರು. ಪ್ರೀಮಿಯರ್ ಆಟೋಮೊಬೈಲ್ಸ್ ತಮ್ಮ ಜನಪ್ರಿಯ ಫಿಯೆಟ್ ಡಿಲೈಟ್ ಕಾರಿಗೆ ಪ್ರೀಮಿಯರ್ ಪದ್ಮಿನಿ ಎಂದು 1974ರಲ್ಲಿ ನಾಮಕರಣ ಮಾಡಿತ್ತು.
2004ರಲ್ಲಿ ಚೇತನ್ ಮೈನಿ ಅವರು ತಮ್ಮದೇ ಅನ್ವೇಷಣೆಯ ಎಲೆಕ್ಟ್ರಿಕ್ ಕಾರಿಗೆ ರೇವಾ ಎಂದು ಹೆಸರಿಟ್ಟಿದ್ದರು. ಭಾರತದಲ್ಲಿ ಈ ಕಾರು ಅಷ್ಟು ಓಡದೇ ಇದ್ದರೂ ಸಹ ಆ ಕಾರನ್ನು ಪಾಶ್ಚಾತ್ಯ ಹೆಸರಿಗೆ ಮರುನಾಮಕರಣ ಮಾಡಲು ಚೇತನ್ ನಿರಾಕರಿಸಿದ್ದರು.
ದೇಶದಲ್ಲಿ ಮೊದಲ ಬಾರಿಗೆ ಕಾರು ಉತ್ಪಾದಿಸಿದ ಹಿಂದೂಸ್ತಾನ್ ಮೋಟರ್ಸ್ ಸಹ ತನ್ನ ಕಾರಿಗೆ ಅಂಬಾಸಡರ್ ಎಂದು ಹೆಸರಿಟ್ಟಿತ್ತು. ಬ್ರಿಟನ್‌ನ ಮಾರಿಸ್ ಆಕ್ಸ್‌ಫರ್ಡ್ ಆಧರಿತ ಈ ಮಾಡೆಲ್‌ಗೆ ಪಾಶ್ಚಾತ್ಯ ಹೆಸರಿಡುವ ಮೂಲಕ ಈ ಟ್ರೆಂಡ್‌ಗೆ ನಾಂದಿ ಹಾಡಿತ್ತು ಹಿಂದೂಸ್ತಾನ್ ಮೋಟರ್ಸ್. ಇದಾದ ಮೇಲೆ 1980ರ ದಶಕದಲ್ಲಿ ಇದೇ ಹಿಂದೂಸ್ತಾನ್ ಮೋಟರ್ಸ್ ಲಾಂಚ್ ಮಾಡಿದ್ದ ಲಕ್ಸುರಿ ಕಾರಿಗೆ ಕಾಂಟೆಸ್ಸಾ ಎಂದು ನಾಮಕರಣ ಮಾಡಲಾಗಿತ್ತು.
ದಶಕದ ಬಳಿಕ ಸೆಡಾನ್‌ಗಳನ್ನು ಲಾಂಚ್ ಮಾಡಿದ ಮಾರುತಿ ಆ ಕಾರುಗಳಿಗೆ ಎಸ್ಟೀಮ್, ಡಿಜೈರ್, ಎಸ್ಟಿಲೋ ಎಂಬ ಹೆಸರುಗಳನ್ನು ಇಡುತ್ತಾ ಬಂದಿದೆ.
ಕಾರು ಖರೀದಿ ಮಾಡುವಾಗಿ ಭಾರತೀಯ ಗ್ರಾಹಕರು ಇಟ್ಟುಕೊಳ್ಳುವ ಆಶಾಭಾವಗಳಿಗೆ ಮ್ಯಾಚಿಂಗ್ ಆಗುವಂತೆ ಹೆಸರಿಡಲು ಪಾಶ್ಚಾತ್ಯ ಹೆಸರುಗಳೇ ಸರಿ ಎಂಬುದು ಆಟೋ ಕಂಪನಿಗಳ ಅಲಿಖಿತ ಅಭಿಪ್ರಾಯವಾಗಿದೆ.