ಸ್ಥಳೀಯತೆಗೆ ಒತ್ತು ನೀಡಿ, ಆರ್ಥಿಕ ಚಟುವಟಿಕೆಗೆ ಗಮನಕೊಡುವ ಕೇರಳದಲ್ಲಿ ಈಗ ತೇಲುವ ಮೀನಿನ ಅಂಗಡಿಯ ಕಾರಣಕ್ಕೆ ರಾಷ್ಟ್ರದ ಗಮನ ಸೆಳೆದಿದೆ.
ಇಬ್ಬರು ಸ್ಥಳೀಯ ಮಹಿಳೆಯರು ಕೇರಳದ ಕೊಟ್ಟಾಯಂನಲ್ಲಿ ತೇಲುವ ಮೀನು ಅಂಗಡಿಯನ್ನು ನಡೆಸುತ್ತಿದ್ದಾರೆ. ಅದರ ಚಿತ್ರ ಮತ್ತು ವಿಡಿಯೋಗಳು ವೈರಲ್ ಆಗಿವೆ.
ಮೀನುಗಾರ ಮಹಿಳೆಯರಿಗೆ ಆರ್ಥಿಕ ಮತ್ತು ಸಾಮಾಜಿಕ ವಿಮೋಚನೆಗಾಗಿ ಕೆಲಸ ಮಾಡುವ ಸೊಸೈಟಿ ಫಾರ್ ಅಸಿಸ್ಟನ್ಸ್ ಟು ಫಿಶರ್ ವುಮೆನ್ (ಎಸ್ಎಎಫ್)ನ ಸಹಕಾರದಲ್ಲಿ ಸರ್ಕಾರದ ಯೋಜನೆಯಾಗಿ ಈ ಅಂಗಡಿ ಆರಂಭವಾಗಿದೆ.
ಕುಮಾರಕಮ್ ಕರಿಯೈಲ್‌ನಲ್ಲಿರುವ ಈ ಫ್ಲೋಟಿಂಗ್ ಸ್ಟಾಲ್ ಕೇರಳದ ಮೀನುಗಾರಿಕಾ ಇಲಾಖೆಯ ಥೀರಮಿತ್ರಿ ಯೋಜನೆಯಡಿ ನಡೆಯುತ್ತಿದೆ.
ಕೋವಿಡ್ -19 ಸಾಂಕ್ರಾಮಿಕ ರೋಗದಿಂದಾಗಿ ಸಣ್ಣ ಮತ್ತು ಅತಿ ಸಣ್ಣ ಪ್ರಮಾಣದ ವ್ಯವಹಾರ ನಡೆಸುತ್ತಿರುವ ಮೀನುಗಾರರೂ ಸಂಕಷ್ಟಕ್ಕೆ ಸಿಲುಕಿದ್ದು, ಈ ಸಂದರ್ಭದಲ್ಲಿ ಮೀನುಗಾರರ ಸಮುದಾಯಕ್ಕೆ ಈ ಯೋಜನೆ ತುಂಬಾ ಉಪಯುಕ್ತವಾಗಿದೆ ಎಂದು ಹೇಳಲಾಗುತ್ತಿದೆ.
ಹತ್ತು ಪ್ಲಾಸ್ಟಿಕ್ ಡ್ರಮ್ ಬಳಸಿ, ಅದರ ಮೇಲೆ ಶೆಲ್ಟರ್ ನಿರ್ಮಿಸಲಾಗಿದೆ. ಒಂದು ಬದಿಯಲ್ಲಿ ಸಾಮಾನ್ಯ ಅಂಗಡಿಯ ಕೌಂಟರ್ ರೀತಿ ರೂಪಾಂತರಿಸಲಾಗಿದೆ. ಇದರಲ್ಲಿ ಇಬ್ಬರು ಮಹಿಳೆಯರು ನಿಂತು ಮೀನಿನ ವ್ಯವಹಾರಕ್ಕೆ ಸಿದ್ಧರಾಗಿರುವುದನ್ನು ಚಿತ್ರದಲ್ಲಿ ಕಾಣಬಹುದಾಗಿದೆ.