ನವದೆಹಲಿ: ಕೇಂದ್ರ ರಸ್ತೆ, ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಲೋಕಸಭೆಯಲ್ಲಿ ವಾಹನ ಸ್ಕ್ರಾಪೇಜ್ ನೀತಿಯ ರೂಪುರೇಷೆಯನ್ನು ಮಂಡಿಸಿದ್ದಾರೆ.
ಇದರ ಪ್ರಕಾರ, ವಾಹನ ಸ್ಕ್ರಾಪೇಜ್ ನೀತಿ ಜಾರಿಯಾದ ನಂತರ ವಾಹನ ಗುಜರಿಗೆ ಹಾಕಿದವರ ಹೊಸ ವಾಹನ ನೋಂದಣಿ ಶುಲ್ಕ ಮನ್ನಾ ಮಾಡಲಾಗುತ್ತದೆ. ರಸ್ತೆ ತೆರಿಗೆ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುತ್ತದೆ.
ಹಳೆಯ ವಾಹನಗಳನ್ನು ಗುಜರಿಗೆ ಹಾಕಿ ಹೊಸದನ್ನು ವಾಹನ ಖರೀದಿಸುವುದರಿಂದ ಆರ್ಥಿಕತೆ ಬೆಳವಣಿಗೆಯಾಗಲಿದೆ. ಮಾಲಿನ್ಯಕಾರಕ ವಾಹನಗಳನ್ನು ರಸ್ತೆಯಿಂದ ತೆಗೆಯುವುದರಿಂದ ಮಾಲಿನ್ಯ ತಡೆಗೆ ಅನುಕೂಲವಾಗಲಿದೆ. ವಾಹನ ಸ್ಕ್ರಾಪೇಜ್ ನೀತಿ ಜಾರಿಗೆ ಒಂದು ತಿಂಗಳು ಮೊದಲು ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಹಳೆಯ ವಾಹನಗಳನ್ನು ಸ್ಕ್ರಾಪ್ ಮಾಡುವುದರಿಂದ ವೈಯಕ್ತಿಕ ವಾಹನಗಳಿಗೆ ರಸ್ತೆ ತೆರಿಗೆಗೆ ಶೇಕಡ 25 ರಷ್ಟು ರಿಯಾಯಿತಿ ನೀಡಲಾಗುವುದು. ವಾಣಿಜ್ಯ ವಾಹನಗಳಿಗೆ ಶೇಕಡ 15 ರಷ್ಟು ರಿಯಾಯಿತಿ ನೀಡಲಾಗುವುದು. ವಾಹನ ಸ್ಕ್ರಾಪಿಂಗ್ ಪ್ರಮಾಣ ಪತ್ರ ಪಡೆದು ಹೊಸ ವಾಹನ ಖರೀದಿಸುವವರಿಗೆ ಶೇಕಡ 5 ರಷ್ಟು ರಿಯಾಯಿತಿ ನೀಡಲಾಗುವುದು.
ಫಿಟ್ನೆಸ್ ಪರೀಕ್ಷೆ ಮತ್ತು ನೋಂದಣಿಯನ್ನು ನವೀಕರಿಸುವ ಬದಲು ವಾಹನಗಳ ಮಾಲೀಕರು ಸ್ಕ್ರಾಪ್ ಮಾಡಲು ಪ್ರೋತ್ಸಾಹಿಸಲಾಗುತ್ತದೆ. ಹಳೆ ವಾಹನವನ್ನು ಸ್ಕ್ರಾಪ್ ಮಾಡುವ ಮಾಲೀಕರಿಗೆ ಶೇಕಡ 4 ರಿಂದ 6 ರಷ್ಟು ವಾಹನದ ಗುಜರಿ ಮೌಲ್ಯವನ್ನು ನೀಡಲಾಗುವುದು.
ಹಳೆಯ ಮತ್ತು ದಫಷಯುಕ್ತ, ಮಾಲಿನ್ಯಕಾರಕ ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡುವುದು, ರಸ್ತೆ, ವಾಹನ ಸುರಕ್ಷತೆ ಸುಧಾರಿಸುವುದು, ಉತ್ತಮ ಇಂಧನ ದಕ್ಷತೆ ಸಾಧಿಸುವುದು ಸೇರಿದಂತೆ ಹಲವು ಉದ್ದೇಶಗಳೊಂದಿಗೆ ಈ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಹೇಳಿದ್ದಾರೆ.