ಬೆಂಗಳೂರು: ಸಾರ್ವಜನಿಕ ಸೇವಾ ವಾಹನಗಳು ಮತ್ತು ರಾಷ್ಟ್ರೀಯ ರಹದಾರಿ ಪರ್ಮಿಟ್ ಹೊಂದಿರುವ ಸರಕು ವಾಹನಗಳಿಗೆ ವೆಹಿಕಲ್ ಲೊಕೇಶನ್ ಟ್ರ್ಯಾಕಿಂಗ್ ಡಿವೈಸ್(VLTD) ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶಕ್ಕೆ ವಾಹನ ಮಾಲೀಕರಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮಹಿಳೆಯರು, ಮಕ್ಕಳು ಸೇರಿ ಎಲ್ಲ ಪ್ರಯಾಣಿಕರ ಸುರಕ್ಷತೆ ಉದ್ದೇಶದಿಂದ ಸಾರ್ವಜನಿಕ ಸೇವಾ ವಾಹನಗಳಿಗೆ ಮತ್ತು ರಾಷ್ಟ್ರೀಯ ರಹಧಾರಿ ಹೊಂದಿದ ಸರಕು ವಾಹನಗಳಿಗೆ ಡಿಸೆಂಬರ್ 1ರಿಂದ ವಿ.ಎಲ್.ಟಿ.ಡಿ. ಹಾಗೂ ಎಮರ್ಜೆನ್ಸಿ ಪ್ಯಾನಿಕ್ ಬಟನ್ ಉಪಕರಣ ಅಳವಡಿಸುವಂತೆ ಸರ್ಕಾರ ಆದೇಶಿಸಿದೆ.
ಇವುಗಳನ್ನು ಅಳವಡಿಸಲು 2024ರ ನವೆಂಬರ್ 30ರವರೆಗೆ ಗಡುವು ನೀಡಲಾಗಿದೆ. ಸಾರಿಗೆ ಇಲಾಖೆಯ ಪ್ರಕಾರ 6 ಲಕ್ಷ ವಾಹನಗಳಿಗೆ ಉಪಕರಣಗಳನ್ನು ಅಳವಡಿಸಬೇಕಿದ್ದು, 13 ಏಜೆನ್ಸಿಗಳನ್ನು ಗೊತ್ತು ಮಾಡಲಾಗಿದೆ. ನಿಗದಿತ ಕಾಲಮಿತಿಯೊಳಗೆ ಉಪಕರಣ ಅಳವಡಿಸದಿದ್ದರೆ ವಾಹನಗಳ ಎಫ್.ಸಿ. ನವೀಕರಿಸುವುದಿಲ್ಲವೆಂದು ಸರ್ಕಾರ ಎಚ್ಚರಿಕೆ ನೀಡಿದೆ.
ವಿ.ಎಲ್.ಟಿ.ಡಿ. ಸೇರಿದಂತೆ ಪ್ಯಾನಿಕ್ ಬಟನ್ ಅಳವಡಿಕೆಗೆ ಪ್ರತಿ ವಾಹನಕ್ಕೆ ಜಿಎಸ್‌ಟಿ ಹೊರತುಪಡಿಸಿ 7,599 ರೂ. ನಿಗದಿಪಡಿಸಿದ್ದು, ಇದಕ್ಕಿಂತ ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಉಪಕರಣಗಳು ಸಿಗಲಿವೆ. ಸರ್ಕಾರದ ಈ ಆದೇಶ ವಾಹನ ಮಾಲೀಕರಿಗೆ ಆರ್ಥಿಕ ಸಂಕಷ್ಟ ತಂದಿದೆ. ಈಗಾಗಲೇ ಪ್ಯಾನಿಕ್ ಬಟನ್ ಅಳವಡಿಸಿರುವ ವಾಹನಗಳಿಗೂ ಕೂಡ ಪುನಃ ಹೊಸ ಉಪಕರಣಗಳನ್ನು ಅಳವಡಿಸುವುದು ಕಷ್ಟ. ಇದಕ್ಕೆ ಕೇಂದ್ರದ ನಿರ್ಭಯಾ ಯೋಜನೆಯಲ್ಲಿ ಅನುದಾನ ಒದಗಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.
ಈಗಾಗಲೇ ಸಾಕಷ್ಟು ವಾಹನಗಳಿಗೆ ಉಪಕರಣ ಅಳವಡಿಸಲಾಗಿದೆ. ವಾಹನಗಳಿಗೆ ಹೊಸದಾಗಿ ಮತ್ತೆ ಉಪಕರಣ ಅಳವಡಿಸಿ ಎಂದು ತಿಳಿಸಿದ್ದು, ಖರ್ಚು ವೆಚ್ಚವನ್ನು ಮಾಲೀಕರೇ ಭರಿಸಬೇಕಿದೆ. ಹೀಗಾಗಿ ವಾಹನ ಮಾಲೀಕರಿಂದ ವಿರೋಧ ವ್ಯಕ್ತವಾಗಿದೆ.