ಶಿವಮೊಗ್ಗ: ಕೇಂದ್ರ ಸರ್ಕಾರ ಸ್ವಾಮ್ಯದ SAIL ಆಡಳಿತದಲ್ಲಿರುವ ಭದ್ರಾವತಿಯ ವಿಐಎಸ್ಎಲ್ ಕಾರ್ಖಾನೆಗೆ ಮರು ಜೀವ ದೊರೆತಿದ್ದು, ಕೆಲವು ವಿಭಾಗಗಳು ಪುನರಾರಂಭ ಮಾಡಿವೆ.
ಇದೇ ವೇಳೆ ಸುಮಾರು 8 ವರ್ಷಗಳಿಂದ ಸ್ಥಗಿತಗೊಂಡಿದ್ದ ಭದ್ರಾವತಿಯ ಮೈಸೂರು ಕಾಗದ ಕಾರ್ಖಾನೆ -ಎಂಪಿಎಂ ಮತ್ತೆ ಆರಂಭವಾಗುವ ನಿರೀಕ್ಷೆ ಮೂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಎಂಪಿಎಂ ಕಾರ್ಖಾನೆ ಪುನಾರಂಭಿಸಲು ಆಸಕ್ತಿ ತೋರಿದೆ.
ಸೆಪ್ಟೆಂಬರ್ 6ರಂದು ಬೆಳಗ್ಗೆ 11:30ಕ್ಕೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಸಚಿವ ಎಂ.ಬಿ. ಪಾಟೀಲ ಅಧ್ಯಕ್ಷತೆಯಲ್ಲಿ ಕಾರ್ಖಾನೆಯ ಸ್ಥಿತಿಗತಿ ಬಗ್ಗೆ ಚರ್ಚೆ ನಡೆಸಲು ಬೆಂಗಳೂರಿನಲ್ಲಿ ಸಭೆ ಕರೆಯಲಾಗಿದೆ.
2015ರಿಂದ ಎಂಪಿಎಂ ಕಾರ್ಖಾನೆ ಯಂತ್ರಗಳು ಸ್ಥಗಿತಗೊಂಡಿವೆ. ಅಧಿಕಾರಿಗಳು, ಕಾಯಂ ಮತ್ತು ಗುತ್ತಿಗೆ ನೌಕರರಿಗೆ 2017ರಲ್ಲಿ ವಿಶೇಷ ಪ್ಯಾಕೇಜ್ ರೂಪಿಸಿ ಸ್ವಯಂ ನಿವೃತ್ತಿ ನೀಡಲಾಗಿದೆ.
ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಹಾಗೂ ಸ್ಥಳೀಯ ಶಾಸಕ ಬಿ.ಕೆ. ಸಂಗಮೇಶ್ವರ ಅವರು ಕಾಂಗ್ರೆಸ್ ಅಧಿಕಾರಕ್ಕೆ ಬಂದಲ್ಲಿ ಎಂಪಿಎಂ ಕಾರ್ಖಾನೆಗೆ ಮರು ಜೀವ ನೀಡುವ ಬಗ್ಗೆ ಭರವಸೆ ನೀಡಿದ್ದರು.
ಸ್ಥಗಿತಗೊಂಡಿದ್ದ ವಿಐಎಸ್ಎಲ್ ಕಾರ್ಖಾನೆ ಎನ್.ಆರ್.ಎಂ. ಘಟಕದಲ್ಲಿ ಉಕ್ಕು ಉತ್ಪಾದನೆ ಕಾರ್ಯ ಆರಂಭವಾಗಿದ್ದು, ಅದೇ ರೀತಿ ಸ್ಥಗಿತಗೊಂಡಿರುವ ಎಂಪಿಎಂ ಕಾರ್ಖಾನೆ ಪುನಾರಂಭಿಸಬೇಕೆಂಬ ಒತ್ತಾಯ ಕೇಳಿ ಬಂದಿದೆ.