ಬೆಂಗಳೂರು: ಕೊರೋನಾ ಸೇರಿ ವಿವಿಧ ಕಾರಣಗಳಿಂದ ಮೊದಲೇ ಆರ್ಥಿಕ ಸಂಕಷ್ಟದಲ್ಲಿರುವ ಗ್ರಾಮೀಣ ಜನತೆಗೆ ತೆರಿಗೆ ಬರೆ ಬೀಳಲಿದೆ ಎಂದು ಹೇಳಲಾಗಿದೆ.
ಮೂಲಸೌಕರ್ಯ ಅಭಿವೃದ್ಧಿಯ ನೆಪದಲ್ಲಿ ಪರೋಕ್ಷವಾಗಿ ಗ್ರಾಮೀಣ ಜನರ ಮೇಲೆ ತೆರಿಗೆ ಹೊರೆ ಹೊರಿಸಲು ಸರ್ಕಾರ ಮುಂದಾಗಿದೆ. ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ -ಗ್ರಾಮ ಪಂಚಾಯಿತಿ ತೆರಿಗೆ ದರ ಮತ್ತು ಶುಲ್ಕಗಳು ತಿದ್ದುಪಡಿ ಕಾಯ್ದೆಯ ಕರಡು ನಿಯಮಗಳನ್ನು ಆಯ್ದ ಗ್ರಾಮಗಳಲ್ಲಿ ಪ್ರಾಯೋಗಿಕವಾಗಿ ಅನುಷ್ಠಾನಗೊಳಿಸಲು ಸರ್ಕಾರದ ವತಿಯಿಂದ ಸಿದ್ಧತೆ ಕೈಗೊಳ್ಳಲಾಗಿದೆ.
ಉದ್ದೇಶಿತ ತೆರಿಗೆ ಹೇರಿಕೆ ಪ್ರಸ್ತಾವದಲ್ಲಿ ಕುಡಿಯುವ ನೀರಿಗೆ ಶುಲ್ಕ ಕಟ್ಟಬೇಕಿದೆ. ಸಾರ್ವಜನಿಕ ನಲ್ಲಿ ನೀರು ಬಳಸುವ ಮನೆಯಿಂದಲೂ ಕೂಡ ತಿಂಗಳಿಗೆ 100 ರೂಪಾಯಿ ವಸೂಲು ಮಾಡಲು ನಿರ್ಧರಿಸಲಾಗಿದೆ. ಗ್ರಾಮ ಪಂಚಾಯಿತಿ ವತಿಯಿಂದ ಹಳ್ಳಿಗಳಲ್ಲಿ ಮೂಲಸೌಕರ್ಯ ಒದಗಿಸಲು ಸಂಪನ್ಮೂಲ ಕ್ರೋಡೀಕರಣ ಅನಿವಾರ್ಯವಾಗಿದ್ದು, ಈ ನಿಟ್ಟಿನಲ್ಲಿ ತೆರಿಗೆ ಹಾಕಲಾಗುವುದು ಎನ್ನಲಾಗಿದೆ.
ಈಗಾಗಲೇ ರಾಜ್ಯದ 6 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜಾರಿಗೆ ತರಲು ಯೋಜಿಸಲಾಗಿದೆ. ತಿದ್ದುಪಡಿಯಲ್ಲಿ ತೆರಿಗೆದಾರರಿಗೆ ಕೆಲವು ವಿನಾಯಿತಿಗಳು ಕೂಡ ಸಿಗಲಿವೆ. ಪ್ರಾಯೋಗಿಕ ವರದಿ ಆಧರಿಸಿ ಸರ್ಕಾರದಿಂದ ತೆರಿಗೆ ಪರಿಷ್ಕರಣೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಲಾಗಿದೆ.