ಬೆಂಗಳೂರು: ವಾಹನ ತೆರಿಗೆ ಪಾವತಿ ಅವಧಿಯನ್ನು ಒಂದು ತಿಂಗಳು ವಿಸ್ತರಣೆ ಮಾಡಲಾಗಿದೆ. ರಾಜ್ಯದಲ್ಲಿ ಕೊರೊನಾ ಸೋಂಕು ಏರಿಕೆಯಾದ ಹಿನ್ನೆಲೆಯಲ್ಲಿ ಎಲ್ಲ ಬಹುತೇಕ ಎಲ್ಲ ವ್ಯವಹಾರ ಸ್ಥಗಿತಗೊಂಡಿದೆ. ಈ ಕಾರಣದಿಂದ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಪಾವತಿಸಲು ಕೊನೆಯ ದಿನಾಂಕವನ್ನು ವಿಸ್ತರಿಸಲಾಗಿದೆ.
ಹೊಸ ವಾಹನಗಳ ನೋಂದಣಿ ಹೊರತಾಗಿ ಉಳಿದ ಮೋಟಾರು ವಾಹನ ತೆರಿಗೆಯನ್ನು ದಂಡ ರಹಿತವಾಗಿ ಮೇ 31 ರೊಳಗೆ ಪಾವತಿಸಲು ಅವಕಾಶ ನೀಡಲಾಗಿದೆ. ಸಾರಿಗೆ ಸಚಿವರಾದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ವಾಹನ ತೆರಿಗೆ ಪಾವತಿ ಅವಧಿ ವಿಸ್ತರಣೆ ಬಗ್ಗೆ ಮಾಹಿತಿ ನೀಡಿದ್ದಾರೆ.