ಬೆಂಗಳೂರು: ಖಾಸಗಿ ಬಸ್ ಮೊದಲಾದ ಸಾರಿಗೆ ವಾಹನಗಳ ತೆರಿಗೆ ವಿನಾಯಿತಿ ಕುರಿತಂತೆ ಒಂದು ವಾರದೊಳಗೆ ಕ್ರಮ ಕೈಗೊಳ್ಳಲಾಗುವುದು ಎಂದು ಸಾರಿಗೆ ಸಚಿವರಾದ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಭರವಸೆ ನೀಡಿದ್ದಾರೆ.
ಸಾರಿಗೆ ಕ್ಷೇತ್ರದ ವಿವಿಧ ಸಂಘಟನೆಗಳ ಮುಖಂಡರೊಂದಿಗೆ ಸಭೆ ನಡೆಸಿ ಬೇಡಿಕೆಗಳ ಬಗ್ಗೆ ಮಾಹಿತಿ ಪಡೆದ ಅವರು, ಬಸ್, ಟ್ಯಾಕ್ಸಿ ಸೇರಿ ಸಾರಿಗೆ ವಾಹನಗಳಿಗೆ ತೆರಿಗೆ ವಿನಾಯಿತಿ ಮೊದಲಾದ ಬೇಡಿಕೆಗಳನ್ನು ಈಡೇರಿಸಲು ಒಂದು ವಾರದೊಳಗೆ ಸರ್ಕಾರದ ತೀರ್ಮಾನ ತಿಳಿಸಲಾಗುವುದು ಎಂದು ಹೇಳಿದ್ದಾರೆ.
ಖಾಸಗಿ ವಾಹನಗಳ ಮಾಲೀಕರು ಮತ್ತು ಚಾಲಕರಿಂದ ಇತ್ತೀಚೆಗೆ ಧರಣಿ ನಡೆಸಲಾಗಿತ್ತು. ಕರ್ನಾಟಕ ಟ್ರಾವೆಲ್ ಆಪರೇಟರ್ ಸಂಘದ ಮುಖಂಡರು, ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದ್ದರು. ಆರು ತಿಂಗಳು ತೆರಿಗೆ ವಿನಾಯಿತಿ ನೀಡಬೇಕು. ಮುಂದಿನ ಆರು ತಿಂಗಳು ಶೇಕಡಾ 50 ರಷ್ಟು ತೆರಿಗೆ ವಿಧಿಸಬೇಕು ಎಂದು ಒತ್ತಾಯಿಸಿದ್ದರು. ಬೇರೆ ರಾಜ್ಯಗಳಲ್ಲಿ ತೆರಿಗೆ ವಿನಾಯಿತಿ ನೀಡಿ ಸಂಕಷ್ಟದಲ್ಲಿರುವ ಸಾರಿಗೆ ಕ್ಷೇತ್ರ ಚೇತರಿಸಿಕೊಳ್ಳಲು ಅನುಕೂಲ ಮಾಡಿಕೊಟ್ಟಿದ್ದು ಅದೇ ರೀತಿ ಇಲ್ಲಿಯೂ ತೆರಿಗೆ ಮನ್ನಾ ಮಾಡಬೇಕೆಂದು ಮನವಿ ಮಾಡಿದ್ದು, ಇದಕ್ಕೆ ಸ್ಪಂದಿಸಿದ ಸರ್ಕಾರ ಒಂದು ವಾರದೊಳಗೆ ಕ್ರಮಕೈಗೊಳ್ಳುವ ಭರವಸೆ ನೀಡಿದೆ ಎನ್ನಲಾಗಿದೆ.