20 ವರ್ಷಕ್ಕಿಂತ ಹಳೆಯ ವಾಹನಗಳನ್ನು ಜೂನ್ 1, 2024ರಿಂದ ಅನಿವಾರ್ಯವಾಗಿ ಡಿ-ರಿಜಿಸ್ಟರ್ ಮಾಡಲಾಗುವುದು ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ಘೋಷಿಸಿದ್ದಾರೆ. ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದರೆ ಅಥವಾ ಅವರ ನೋಂದಣಿ ಪ್ರಮಾಣಪತ್ರವನ್ನು ನವೀಕರಿಸದಿದ್ದರೆ, 20 ವರ್ಷಕ್ಕಿಂತ ಹಳೆ ವಾಹನಗಳನ್ನು ಡಿ-ನೋಂದಾಯಿಸಲಾಗುವುದು ಎಂದಿದ್ದಾರೆ.
ವಾಹನ ಸ್ಕ್ರ್ಯಾಪಿಂಗ್ ನೀತಿಯ ಬಗ್ಗೆ ಮಾತನಾಡಿದ ಗಡ್ಕರಿ, ಈ ನೀತಿಯು 15 ವರ್ಷಗಳ ಹಳೆಯ ಸರ್ಕಾರಿ, ವಾಣಿಜ್ಯ ವಾಹನಗಳಿಗೆ ಮತ್ತು 20 ವರ್ಷ ಹಳೆಯ ಖಾಸಗಿ ವಾಹನಗಳಿಗೆ ಅನ್ವಯಿಸಲಿದೆ. ಈ ನೀತಿಯನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಫೆಬ್ರವರಿ 1 ರಂದು ತಮ್ಮ ಬಜೆಟ್ ನಲ್ಲಿ ಪ್ರಕಟಿಸಿದ್ದಾರೆ. 15 ವರ್ಷಕ್ಕಿಂತ ಹಳೆಯ ಮತ್ತು ಫಿಟ್ನೆಸ್ ಪರೀಕ್ಷೆಯಲ್ಲಿ ವಿಫಲವಾದ ವಾಣಿಜ್ಯ ವಾಹನಗಳಿಗೆ ಡಿ- ನೋಂದಣಿ ಗಡುವು 1 ಏಪ್ರಿಲ್ 2023 ಆಗಿದೆ.
20 ವರ್ಷಗಳ ನಂತರ ಫಿಟ್ನೆಸ್ ಪ್ರಮಾಣಪತ್ರಗಳನ್ನು ನವೀಕರಿಸುವ ಖಾಸಗಿ ವಾಹನ ಮಾಲೀಕರು 7,000 ರೂಪಾಯಿಗಳಿಗಿಂತ ಹೆಚ್ಚಿನ ಶುಲ್ಕವನ್ನು ಪಾವತಿಸಬೇಕಾಗುತ್ತದೆ. ನೋಂದಣಿ ಶುಲ್ಕ ನವೀಕರಣಕ್ಕಾಗಿ ಅವರು 5,000 ರೂಪಾಯಿ ಪಾವತಿಸಬೇಕು. ಹಳೆಯ ವಾಹನಗಳನ್ನು ಸ್ಕ್ರ್ಯಾಪಿಂಗ್ ಕೇಂದ್ರಗಳಿಗೆ ನೀಡುವ ವಾಹನ ಮಾಲೀಕರಿಗೆ ಸರ್ಕಾರ ವಿತ್ತೀಯ ಪ್ರೋತ್ಸಾಹವನ್ನು ನೀಡಲಿದೆ ಎಂದು ಗಡ್ಕರಿ ಹೇಳಿದ್ದಾರೆ. ಹಳೆಯ ವಾಹನವನ್ನು ಸ್ಕ್ಯಾಪಿಂಗ್ ಸೆಂಟರ್ ಗೆ ಹಾಕಿ, ಹೊಸ ವಾಹನ ಖರೀದಿ ಮಾಡುವ ಮಾಲೀಕರಿಗೆ ವಾಹನ ಕಂಪನಿಗಳು ಶೇಕಡಾ 5 ರಷ್ಟು ರಿಯಾಯಿತಿ ನೀಡುತ್ತದೆ. ನೋಂದಣಿ ಶುಲ್ಕ ಮತ್ತು ಶೇಕಡಾ 25 ರಷ್ಟು ರಸ್ತೆ ತೆರಿಗೆ ವಿನಾಯಿತಿ ನೀಡುವಂತೆ ರಾಜ್ಯಗಳಿಗೆ ಸೂಚಿಸಲಾಗಿದೆ.