ಮಾಲಿನ್ಯ ತಡೆ ಹಾಗೂ ರಸ್ತೆ ಸುರಕ್ಷತೆಗಾಗಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, 2021ರ ಬಜೆಟ್ ನಲ್ಲಿ ಸ್ಕ್ರ್ಯಾಪೇಜ್ ನೀತಿಯನ್ನು ಘೋಷಿಸಿದ್ದರು. 15 ವರ್ಷಕ್ಕಿಂತ ಹಳೆ ಕಾರುಗಳು ಎಮಿಷನ್ ಪರೀಕ್ಷೆ ಮಾಡಿಸುವುದು ಕಡ್ಡಾಯ. ಒಂದು ವೇಳೆ ಎಮಿಷನ್ ಪರೀಕ್ಷೆಯಲ್ಲಿ ವಿಫಲವಾದ್ರೆ ಕಾರನ್ನು ರಸ್ತೆಗೆ ಬಿಡುವಂತಿಲ್ಲ.
ಎಂಟು ವರ್ಷಕ್ಕಿಂತ ಮೇಲ್ಪಟ್ಟ ಕಾರುಗಳು ಫಿಟ್ನೆಸ್ ಪರೀಕ್ಷೆಗೆ ಹೋಗಬೇಕಾಗುತ್ತದೆ. ಈ ಪರೀಕ್ಷೆಯಲ್ಲಿ ವಿಫಲವಾದರೆ, ಆ ಕಾರನ್ನು ಚಲಾಯಿಸುವಂತಿಲ್ಲ. ಕಾರು ಈ ಪರೀಕ್ಷೆಯಲ್ಲಿ ಉತ್ತೀರ್ಣರಾದರೆ, ಫಿಟ್ನೆಸ್ ಪ್ರಮಾಣಪತ್ರವನ್ನು ನವೀಕರಿಸಿದಾಗಲೆಲ್ಲ ಸರಿಸುಮಾರು ಶೇಕಡಾ 10ರಿಂದ 20ರಷ್ಟು ಗ್ರೀನ್ ಟ್ಯಾಕ್ಸ್ ವಿಧಿಸಲಾಗುತ್ತದೆ. ಐದು ವರ್ಷಗಳವರೆಗೆ ಮಾನ್ಯವಾಗಿರುತ್ತದೆ. ಸರ್ಕಾರದ ಈ ಹೊಸ ನೀತಿ ಸ್ವಂತ ಹಳೆ ಕಾರು ಹೊಂದಿದವರಿಗೆ ದುಬಾರಿಯಾಗಲಿದೆ.
ಸ್ವಂತ ಕಾರನ್ನು ಹೊಂದಿದ್ದರೆ ಈ ಎಲ್ಲ ನಿಯಮಗಳನ್ನು ಪಾಲಿಸಬೇಕಾಗುತ್ತದೆ. ಜೊತೆಗೆ ಕಾರನ್ನು ಸಾಲದ ಮೂಲಕ ಖರೀದಿ ಮಾಡಿದ್ರೆ ಬಡ್ಡಿ ದುಬಾರಿಯಾಗಲಿದೆ. ಕಾರ್ ಖರೀದಿ ಮಾಡಿ ಸಾಲ ಪಾವತಿ ಮಾಡುವ ಬದಲು ಕಾರನ್ನು ಗುತ್ತಿಗೆ ತೆಗೆದುಕೊಳ್ಳುವುದು ಅಗ್ಗವಾಗಲಿದೆ.
ಕಾರು ಕಂಪನಿಗಳು ಹೊಸ ಮಾಡೆಲ್ ಕಾರುಗಳನ್ನು ಕೂಡ ಗುತ್ತಿಗೆಗೆ ನೀಡುತ್ತವೆ. ಇದು ಗ್ರಾಹಕರಿರುವ ನಗರ, ಪ್ರದೇಶವನ್ನು ಅವಲಂಭಿಸಿರುತ್ತದೆ. 12ರಿಂದ 60 ತಿಂಗಳವರೆಗೆ ಕಾರುಗಳನ್ನು ಕಂಪನಿಗಳು ಬಾಡಿಗೆಗೆ ನೀಡುತ್ತವೆ. ಪ್ರಮುಖ ಕಾರು ತಯಾರಕರಾದ ಮಹೀಂದ್ರಾ ಮತ್ತು ಮಹೀಂದ್ರಾ, ಮಾರುತಿ ಸುಜುಕಿ, ಹ್ಯುಂಡೈ, ಬಿಎಂಡಬ್ಲ್ಯು, ವೋಕ್ಸ್ ವ್ಯಾಗನ್ ಮತ್ತು ಸ್ಕೋಡಾ ಕಂಪನಿಗಳು ಕಾರುಗಳನ್ನು ಗುತ್ತಿಗೆಗೆ ಕನಿಷ್ಠ ಅಥವಾ ಕಡಿಮೆ ಬೆಲೆಗೆ ನೀಡುತ್ತವೆ.
ಉದಾಹರಣೆಗೆ, ಮಾರುತಿ ಸುಜುಕಿ ಗ್ರಾಹಕರು ವ್ಯಾಗನ್ಆರ್, ಸ್ವಿಫ್ಟ್, ಡಿಜೈರ್, ಎರ್ಟಿಗಾ, ಇಗ್ನಿಸ್, ಬಲೆನೊ, ಸಿಯಾಜ್, ಎಕ್ಸ್ಎಲ್ 6, ಮತ್ತು ಎಸ್-ಕ್ರಾಸ್‌ಗಳಲ್ಲಿ ಒಂದನ್ನು ಗುತ್ತಿಗೆಗೆ ತೆಗೆದುಕೊಳ್ಳಬಹುದು. ಕೊಚ್ಚಿಯಲ್ಲಿ ವ್ಯಾಗನ್ ಆರ್ ಕಾರನ್ನು ಗುತ್ತಿಗೆಗೆ ಪಡೆದರೆ ಮಾಸಿಕ 12,513 ರೂಪಾಯಿ ಪಾವತಿಸಬೇಕು. ಇಗ್ನಿಸ್ ಕಾರಿಗೆ ಮಾಸಿಕ 13,324 ರೂಪಾಯಿ ಪಾವತಿಸಬೇಕು. ಭಾರತದಲ್ಲಿ ಕಾರನ್ನು ಗುತ್ತಿಗೆಗೆ ಪಡೆಯುವವರ ಸಂಖ್ಯೆ ತುಂಬಾ ಕಡಿಮೆ. ಅಮೆರಿಕಾಕ್ಕೆ ಹೋಲಿಸಿದ್ರೆ ಶೇಕಡಾ 1ರಷ್ಟಿದೆ. ಅಮೆರಿಕಾದಲ್ಲಿ ಶೇಕಡಾ 45 ರಷ್ಟು ಮಂದಿ ಕಾರನ್ನು ಗುತ್ತಿಗೆಗೆ ಪಡೆಯುತ್ತಿದ್ದಾರೆ. ಮುಂದಿನ 10 ವರ್ಷಗಳಲ್ಲಿ ಭಾರತದಲ್ಲಿ ಕಾರು ಗುತ್ತಿಗೆ ಮಾರುಕಟ್ಟೆ ಶೇಕಡಾ 15-20ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
ಕಾರನ್ನು ಗುತ್ತಿಗೆಗೆ ಪಡೆಯುವುದು ಎಂದ್ರೆ ಖರೀದಿ ಮಾಡುವುದಲ್ಲ. ಗುತ್ತಿಗೆ ಅವಧಿ 5 ವರ್ಷವಿರುತ್ತದೆ. ನಿಗದಿತ ಕಿಲೋಮೀಟರ್ ಓಡಿದ ನಂತ್ರ ಕಂಪನಿಗೆ ಕಾರನ್ನು ವಾಪಸ್ ನೀಡಬೇಕು. ಯಾವುದೇ ಸಾಲ ಪಡೆಯದೆ ಕಾರನ್ನು ಗುತ್ತಿಗೆಗೆ ಪಡೆಯಬಹುದು. ನಿಗದಿತ ಸಮಯದ ನಂತ್ರ ಗ್ರಾಹಕ ಹೊಸ ಮಾದರಿ ಕಾರನ್ನು ಗುತ್ತಿಗೆಗೆ ಪಡೆಯಬಹುದು.
ಕಾರಿಗೆ ಪ್ರತಿ ತಿಂಗಳು ನೀಡುವ ಗುತ್ತಿಗೆ ಕಾರಿನ ಸಾಲಕ್ಕೆ ಪ್ರತಿ ತಿಂಗಳು ನೀಡುವ ಇಎಂಐಗಿಂತ ಕಡಿಮೆಯಿರುತ್ತದೆ. ಬಜೆಟ್ ಗೆ ತಕ್ಕಂತೆ ನೀವು ಕಾರು ಖರೀದಿ ಮಾಡಬೇಕಾಗುತ್ತದೆ. ಆದ್ರೆ ಗುತ್ತಿಗೆಯಲ್ಲಿ ದುಬಾರಿ ಬೆಲೆಯ ಕಾರನ್ನು ಸುಲಭವಾಗಿ ಪಡೆಯಬಹುದು. ಆದ್ರೆ ಗುತ್ತಿಗೆ ಕಾರಿನಲ್ಲಿ ರಿಸೇಲ್ ಗೆ ಅವಕಾಶವಿರುವುದಿಲ್ಲ.