ಬೆಂಗಳೂರು: ಎಲ್ಲಾ ಮಾದರಿಯ ವಾಹನಗಳಿಗೆ ಹೈ ಸೆಕ್ಯೂರಿಟಿ ರಿಜಿಸ್ಟ್ರೇಷನ್ ಪ್ಲೇಟ್ -HSRP ಕಡ್ಡಾಯಗೊಳಿಸಲಾಗಿದೆ.
2019 ರ ಮಾರ್ಚ್ 31 ಕ್ಕಿಂತ ಪೂರ್ವದಲ್ಲಿ ನೊಂದಾವಣೆಯಾದ ಎಲ್ಲ ವಾಹನಗಳಿಗೆ ಹೆಚ್.ಎಸ್.ಆರ್.ಪಿ. ಅಳವಡಿಸಲು ಖಾಸಗಿ ಏಜೆನ್ಸಿಗಳನ್ನು ಆಯ್ಕೆಮಾಡುವ ಕುರಿತಾಗಿ ಸಾರಿಗೆ ಇಲಾಖೆ ವತಿಯಿಂದ ಟೆಂಡರ್ ಆಹ್ವಾನಿಸಲಾಗಿದೆ.
ಹಳೆಯ ನಂಬರ್ ಪ್ಲೇಟ್ ಗಳನ್ನು ಬದಲಿಸಿ ಹೊಸದಾಗಿ ಹೆಚ್.ಎಸ್.ಆರ್.ಪಿ. ಪ್ಲೇಟ್ ಗಳನ್ನು ಅಳವಡಿಸಲು ತಗಲುವ ವೆಚ್ಚವನ್ನು ವಾಹನ ಮಾಲೀಕರೇ ಭರಿಸಬೇಕಿದೆ. ರಾಜ್ಯದಲ್ಲಿ ಸುಮಾರು 1.76 ಕೋಟಿ ವಾಹನಗಳಿಗೆ ಈ ನಂಬರ್ ಪ್ಲೇಟ್ ಅಳವಡಿಸಲು ತೀರ್ಮಾನಿಸಲಾಗಿದೆ.
ಪ್ರತಿ ವಾಹನದ ಹೆಚ್.ಎಸ್.ಆರ್.ಪಿ.ಗೆ ಪ್ರತ್ಯೇಕವಾಗಿ ವಿಶಿಷ್ಟ ಗುರುತಿನ ಸಂಖ್ಯೆ ನೀಡಲಾಗುತ್ತದೆ. ಹೊಸ ಮಾದರಿಯ ಈ ನಂಬರ್ ಪ್ಲೇಟ್ ಹೆಚ್ಚು ಸುರಕ್ಷಿತವಾಗಿದ್ದು, ಸಾರಿಗೆ ಇಲಾಖೆಯಲ್ಲಿ ನೋಂದಣಿ ಮಾಡಲ್ಪಟ್ಟಿರುತ್ತದೆ. ಒಂದೇ ನೋಂದಣಿ ಸಂಖ್ಯೆಯ ಎರಡು ವಾಹನಗಳಿಗೆ ಇಂತಹ ನಂಬರ್ ಪ್ಲೇಟ್ ಪಡೆದುಕೊಳ್ಳಲು ಸಾಧ್ಯವಿಲ್ಲ. ದ್ವಿ ಚಕ್ರ ವಾಹನಗಳಿಗೆ ಪ್ರತ್ಯೇಕವಾದ ಕೋಡ್ ಇರಲಿದೆ. ತ್ರಿಚಕ್ರವಾಹನ, ನಾಲ್ಕು ಚಕ್ರ ವಾಹನ ಸೇರಿದಂತೆ ಎಲ್ಲ ವಾಹನಗಳಿಗೆ ಮುಂದಿನ ಭಾಗದಲ್ಲಿ ಡಿಜಿಟಲ್ ಸ್ಟಿಕ್ಕರ್ ಅಂಟಿಸಲಾಗುತ್ತದೆ. ಸ್ಟಿಕರ್ ನಲ್ಲಿ ವಾಹನ ಎಂಜಿನ್ ಸಂಖ್ಯೆ, ಚಾಸಿಸ್ ನಂಬರ್, ನೋಂದಣಿ ಸಂಖ್ಯೆ, ವಾಹನದ ಮಾದರಿ ಜೊತೆಗೆ ಮಾಲೀಕರ ವಿವರ ಕೂಡ ಇರಲಿದೆ ಎಂದು ಹೇಳಲಾಗಿದೆ.