ನವದೆಹಲಿ: ವಾಹನ ಮಾಲೀಕತ್ವ ವರ್ಗಾವಣೆ ಪ್ರಕ್ರಿಯೆ ಸರಳಗೊಳಿಸಿದ ಸಾರಿಗೆ ಇಲಾಖೆ ಕೇಂದ್ರೀಯ ಮೋಟಾರು ವಾಹನ ಕಾಯ್ದೆಗೆ ತಿದ್ದುಪಡಿ ತಂದಿದೆ.
ವಾಹನ ಮಾಲೀಕರು ತಮ್ಮ ವಾಹನಗಳ ವಾರಸುದಾರರು ಯಾರು ಎಂಬುದನ್ನು ಸರಳ ಪ್ರಕ್ರಿಯೆಯ ಮೂಲಕ ದಾಖಲಿಸಿಕೊಳ್ಳಬಹುದಾಗಿದೆ. ಈ ಕುರಿತಂತೆ ಕೇಂದ್ರ ವಾಹನ ಕಾಯ್ದೆ 1989 ಕ್ಕೆ ಸಾರಿಗೆ ಇಲಾಖೆಯಿಂದ ತಿದ್ದುಪಡಿ ತರಲಾಗಿದೆ.
ವಾಹನ ನೋಂದಣಿಯ ವೇಳೆ ವಾಹನ ಮಾಲೀಕರು ತಮ್ಮ ನಾಮಿನಿಯ ಹೆಸರನ್ನು ಕೂಡ ಸಲ್ಲಿಸಬಹುದಾಗಿದೆ. ಆನ್ಲೈನ್ ಮೂಲಕ ನಂತರವೂ ನಾಮಿನಿ ಹೆಸರನ್ನು ಸೂಚಿಸಬಹುದು. ಒಂದು ವೇಳೆ ವಾಹನ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ವಾಹನದ ಮಾಲೀಕತ್ವದ ವರ್ಗಾವಣೆ ಸುಲಭವಾಗುತ್ತದೆ.
ಬ್ಯಾಂಕ್ ಖಾತೆಗಳ ನಾಮಿನಿಯ ರೀತಿಯಲ್ಲಿಯೇ ವಾಹನ ಮಾಲೀಕತ್ವದಲ್ಲಿಯೂ ನಾಮಿನಿ ಪ್ರಕ್ರಿಯೆ ಇರಲಿದೆ. ದೇಶದಲ್ಲಿ ವಾಹನ ಮಾಲೀಕತ್ವ ವರ್ಗಾವಣೆಗೆ ಸಂಬಂಧಿಸಿದಂತೆ ಏಕರೂಪದ ನಿಯಮಾವಳಿ ಇರಲಿಲ್ಲ. ವಾಹನ ಮಾಲೀಕರು ಮೃತಪಟ್ಟ ಸಂದರ್ಭದಲ್ಲಿ ಮಾಲಿಕತ್ವ ವರ್ಗಾವಣೆಗಾಗಿ ಅನೇಕ ಕಚೇರಿಗಳಿಗೆ ಅಲೆದಾಡಬೇಕಿತ್ತು. ಈ ಕಾರಣದಿಂದ ಕಾಯ್ದೆಗೆ ತಿದ್ದುಪಡಿ ತರಲಾಗಿದ್ದು, ವಾಹನ ಮಾಲೀಕರು ವರ್ಗಾವಣೆ ಪ್ರಕ್ರಿಯೆಯನ್ನು ಸರಳಗೊಳಿಸಲಾಗಿದೆ.