ಬೆಂಗಳೂರು: ಮಕ್ಕಳು, ಮಹಿಳೆಯರ ಸುರಕ್ಷತೆಗಾಗಿ ಖಾಸಗಿ, ಸರ್ಕಾರಿ ಸಾರಿಗೆ ವಾಹನಗಳ ಮೇಲೆ ನಿಗಾವಹಿಸಲು ಲೊಕೇಷನ್ ಟ್ರ್ಯಾಕಿಂಗ್ ಉಪಕರಣ ಮತ್ತು ಪ್ಯಾನಿಕ್ ಬಟನ್ ಅಳವಡಿಕೆ ಕಡ್ಡಾಯಗೊಳಿಸಲಾಗಿದೆ. ಸಂಪುಟ ಸಭೆಯಲ್ಲಿ ಈ ಕುರಿತು ನಿರ್ಧಾರ ಕೈಗೊಳ್ಳಲಾಗಿದೆ.
ಕಾರ್, ಬಸ್, ಕ್ಯಾಬ್ ಸೇರಿದಂತೆ ಪ್ರಯಾಣಿಕರ ವಾಹನಗಳಲ್ಲಿ ಸಾರ್ವಜನಿಕರ ಸುರಕ್ಷಿತ ಪ್ರಯಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಖಾಸಗಿ ಮತ್ತು ಸರ್ಕಾರಿ ಸೇರಿದಂತೆ ಎಲ್ಲ ಸಾರ್ವಜನಿಕ ಸಾರಿಗೆ ವಾಹನಗಳಲ್ಲಿ ವೆಹಿಕಲ್ ಲೊಕೇಷನ್ ಟ್ರ್ಯಾಕಿಂಗ್ ಡಿವೈಸ್ ಸಿಸ್ಟಮ್ ಮತ್ತು ಎಮರ್ಜೆನ್ಸಿ ಪ್ಯಾನಿಕ್ ಬಟನ್ ಅಳವಡಿಸಲು ಸರ್ಕಾರ ಉದ್ದೇಶಿಸಿದೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. ಇದರಿಂದ ವಾಹನಗಳು ಸಮಯಕ್ಕೆ ಸರಿಯಾಗಿ ನಿಗದಿತ ಸ್ಥಳ ತಲುಪಲಿದ್ದು, ಅನವಶ್ಯಕ ವಿಳಂಬ ತಡೆಯಬಹುದು. ಅನಧಿಕೃತವಾಗಿ ಸಂಚರಿಸುವ ವಾಹನಗಳ ಮೇಲೆ ನಿಗಾ ವಹಿಸಬಹುದು. ವಾಹನ ಚಾಲಕರು ನಿಯಮ ಬಾಹಿರವಾಗಿ ಪ್ರಯಾಣಿಕರಿಗೆ ತೊಂದರೆಯಾಗದಂತೆ ಬೇರೆ ಮಾರ್ಗದಲ್ಲಿ ಸಂಚರಿಸುವುದನ್ನು ತಪ್ಪಿಸಬಹುದು.
ಸಂಪುಟ ಸಭೆಯ ನಂತರ ಕಾನೂನು ಸಚಿವ ಜೆ.ಸಿ. ಮಾಧುಸ್ವಾಮಿ ಈ ಬಗ್ಗೆ ಮಾಹಿತಿ ನೀಡಿದ್ದು, ಕೇಂದ್ರ ಸರ್ಕಾರದ ಸಹಭಾಗಿತ್ವದಲ್ಲಿ ಯೋಜನೆ ಜಾರಿಯಾಗಲಿದ್ದು, ರಾಜ್ಯ ಸರ್ಕಾರ ಶೇ. 40ರಷ್ಟು ಅನುದಾನ ನೀಡಲಿದೆ ಎಂದು ಹೇಳಿದ್ದಾರೆ.