ಬೆಂಗಳೂರು: ವಾಹನ ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಜಾರಿ ಎನ್ನುವ ವಿಮಾ ಕಂಪನಿ ವಾದ ತಪ್ಪು ಎಂದು ಹೈಕೋರ್ಟ್ ಮಹತ್ವದ ತೀರ್ಪು ನೀಡಿದ್ದು, ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ವಿಮೆ ಅನ್ವಯ ಆಗುತ್ತದೆ ಎಂದು ಹೇಳಿದೆ.
ವಿಮೆ ಮಾಡಿಸಿದ ದಿನದ ಮಧ್ಯರಾತ್ರಿಯಿಂದ ಪಾಲಿಸಿ ಜಾರಿಯಾಗಿ ಹಾನಿ ಪರಿಹಾರ ವ್ಯಾಪ್ತಿ ಆರಂಭವಾಗುತ್ತದೆ ಎಂದು ವಿಮಾ ಕಂಪನಿ ವಾದಿಸಿದ್ದು ಈ ವಾದವನ್ನು ತಿರಸ್ಕರಿಸಿದ ಹೈಕೋರ್ಟ್ ಪ್ರೀಮಿಯಂ ಸ್ವೀಕರಿಸಿದ ತಕ್ಷಣದಿಂದಲೇ ವಿಮೆ ಜಾರಿಗೆ ಬಂದು ವಾಹನ ಹಾನಿ ಪರಿಹಾರದ ವ್ಯಾಪ್ತಿಗೆ ಬರುತ್ತದೆ ಎಂದು ತೀರ್ಪು ನೀಡಿದೆ.
ನ್ಯಾಯಮೂರ್ತಿ ಹಂಚೆಟಿ ಸಂಜೀವಕುಮಾರ್ ಅವರಿದ್ದ ಏಕಸದಸ್ಯಪೀಠ ದಲ್ಲಿ ಈ ಕುರಿತ ವಿಚಾರಣೆ ನಡೆದು ಪ್ರೀಮಿಯಂ ಕಟ್ಟಿದ ಕ್ಷಣದಿಂದಲೇ ಜಾರಿಯಾಗಲಿದೆ ಎಂದು ತೀರ್ಪು ನೀಡಲಾಗಿದೆ. ಬೀದರ್ ಜಿಲ್ಲೆ ನಿವಾಸಿ ಮ್ಯಾಕ್ಸಿಕ್ಯಾಬ್ ಮಾಲೀಕ ಸುಭಾಷ್ ಅವರು 2008 ರ ನೇ 7 ರಂದು ಬೆಳಗ್ಗೆ 10 ಗಂಟೆಗೆ ಯುನೈಟೆಡ್ ಇಂಡಿಯಾ ಕಾರ್ಪೋರೇಶನ್ ಕಂಪನಿ ಏಜೆಂಟ್ ಗೆ ವಿಮೆ ಪಾಲಿಸಿ ಪ್ರೀಮಿಯಂ ಪಾವತಿಸಿದ್ದರು. ಅದೇ ದಿನ ಮಧ್ಯಾಹ್ನ 1.30 ರ ವೇಳೆಗೆ ಅವರ ವಾಹನ ಅಪಘಾತಕ್ಕೀಡಾಗಿದ್ದು, ಅವರೂ ಸೇರಿ ಹಲವರು ಗಾಯಗೊಂಡಿದ್ದರು. ಬೀದರ್ ಜಿಲ್ಲಾ ನ್ಯಾಯಾಲಯ ಮತ್ತು ವಾಹನ ಅಪಘಾತ ಕ್ಲೇಮು ನ್ಯಾಯಾಧಿಕರಣ 2008 ರ ಮೇ 8 ರ ಮಧ್ಯರಾತ್ರಿ 12 ಗಂಟೆಯಿಂದ ವಿಮೆ ಪಾಲಿಸಿ ಜಾರಿಯಲ್ಲಿರುತ್ತದೆ ಎಂದು ಹೇಳಿತ್ತು.
ಮೇ 8 ರ ಮಧ್ಯರಾತ್ರಿ 12 ಗಂಟೆಯಿಂದ ವಿಮೆ ಪಾಲಿಸಿ ಜಾರಿಯಲ್ಲಿದ್ದು ಮುಂದಿನ 12 ತಿಂಗಳಿಗೆ ಅನ್ವಯವಾಗುತ್ತದೆ ಎಂದು ವಿಮೆ ಕಂಪನಿ ಪರ ವಕೀಲರು ಹೇಳಿದ್ದು, ಇದನ್ನು ಒಪ್ಪದ ಹೈಕೋರ್ಟ್, ಮೇ 7 ರಂದು ಕಚೇರಿ ಸಮಯ ಆರಂಭವಾದ ಸಂದರ್ಭದಲ್ಲಿ ಕ್ಯಾಬ್ ಮಾಲಿಕ ಪ್ರೀಮಿಯಂ ಪಾವತಿಸಿದ್ದಾರೆ. ಹೀಗಾಗಿ ವಿಮೆ ಕಂಪನಿ ಮತ್ತು ವಾಹನ ಮಾಲೀಕರ ನಡುವಿನ ಪಾಲಿಸಿ ಒಪ್ಪಂದ ಪ್ರೀಮಿಯಂ ಪಾವತಿಸಿದ ಕ್ಷಣದಿಂದ ಆರಂಭವಾಗುತ್ತದೆ. ವಾಹನ ನಷ್ಟಪರಿಹಾರ ವ್ಯಾಪ್ತಿಗೆ ಬರುತ್ತದೆ ಎಂದು ಆದೇಶಿಸಿದೆ.