ಬೆಂಗಳೂರು: 30 ಸಾವಿರ ರೂ.ಗಿಂತ ಹೆಚ್ಚು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ್ದ 15 ದಿನಗಳ ಕಾಲಾವಕಾಶವನ್ನು 30 ದಿನಗಳವರೆಗೆ ವಿಸ್ತರಿಸಲು ಮಸೂದೆ ಅಂಗೀಕಾರಗೊಂಡಿದೆ. ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ(ತಿದ್ದುಪಡಿ) ವಿಧೇಯಕವನ್ನು ವಿಧಾನಮಂಡಲದಲ್ಲಿ ಅಂಗೀಕರಿಸಲಾಗಿದೆ.
ಸಾರಿಗೆ ಸಚಿವ ಬಿ. ಶ್ರೀರಾಮುಲು ವಿಧಾನಸಭೆಯಲ್ಲಿ ಮತ್ತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿಧಾನಪರಿಷತ್ ನನಲ್ಲಿ 30 ಸಾವಿರ ರೂ. ಮೇಲ್ಪಟ್ಟು ತೆರಿಗೆ ಪಾವತಿಸುವ ವಾಹನ ಮಾಲೀಕರಿಗೆ ನೀಡಿದ 15 ದಿನಗಳ ಕಾಲಾವಕಾಶವನ್ನು 30 ದಿನಗಳವರೆಗೆ ವಿಸ್ತರಿಸುವ ಸಂಬಂಧ ಕರ್ನಾಟಕ ಮೋಟಾರು ವಾಹನಗಳ ತೆರಿಗೆ ನಿರ್ಧರಣೆ ತಿದ್ದುಪಡಿ ವಿಧೇಯಕವನ್ನು ಮಂಡಿಸಿ ಅನುಮೋದನೆ ಪಡೆದುಕೊಂಡಿದ್ದಾರೆ. ಉಭಯ ಸದನಗಳಲ್ಲಿ ಧ್ವನಿಮತದ ಮೂಲಕ ಕಾಯ್ದೆಗೆ ಅಂಗೀಕಾರ ನೀಡಲಾಗಿದೆ.
30 ಸಾವಿರ ರೂಪಾಯಿಗಿಂತ ಹೆಚ್ಚು ವಾಹನ ತೆರಿಗೆ ಪಾವತಿಸುವ ಮಾಲೀಕರು ನಿಗದಿತ ಅವಧಿಯಲ್ಲಿ ತೆರಿಗೆ ಕಟ್ಟಲು ಸಾಧ್ಯವಾಗದಿದ್ದರೆ 15 ದಿನ ಹೆಚ್ಚುವರಿ ಕಾಲಾವಕಾಶ ನೀಡಲಾಗಿತ್ತು. ಖಾಸಗಿ ವಾಹನಗಳ ಮಾಲೀಕರ ಬೇಡಿಕೆ ಹಿನ್ನೆಲೆಯಲ್ಲಿ 30 ದಿನ ಕಾಲಾವಕಾಶ ನೀಡಲಾಗಿದೆ.