ಬೆಂಗಳೂರು: ಮೊದಲೇ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿದ ಜನತೆಗೆ ಮತ್ತೊಂದು ಶಾಕ್ ಎದುರಾಗಿದೆ. ತರಕಾರಿ ಬೆಲೆ ಏರಿಕೆ ಕಂಡಿದೆ.
ಪೆಟ್ರೋಲ್, ಡೀಸೆಲ್, ಅಡುಗೆ ಎಣ್ಣೆ, ದಿನಸಿ ಪದಾರ್ಥಗಳ ಬೆಲೆ ಏರಿಕೆಯಿಂದ ಕಂಗಾಲಾಗಿದ್ದ ಗ್ರಾಹಕರಿಗೆ ಗಾಯದ ಮೇಲೆ ಬರೆ ಎಳೆದಂತೆ ತರಕಾರಿಗಳ ಬೆಲೆಯಲ್ಲಿ ದಿಢೀರ್ ಏರಿಕೆ ಕಂಡಿದೆ.
ಟೊಮೆಟೊ ಬೆಲೆ ಕೆಜಿಗೆ 15 ರಿಂದ 20 ರೂಪಾಯಿ ಇದ್ದು, ಈಗ ಬರೋಬ್ಬರಿ 60 ರಿಂದ 70 ರೂಪಾಯಿಗೆ ಏರಿಕೆಯಾಗಿದೆ. ಬಹುತೇಕ ಎಲ್ಲ ತರಕಾರಿ ಒಂದು ಕೆಜಿ ದರ 50ರಿಂದ 70 ರೂಪಾಯಿವರೆಗೆ ಏರಿದೆ. ಕೊತ್ತಂಬರಿ ಸೊಪ್ಪು, ಹಸಿಮೆಣಸಿನಕಾಯಿ, ಬದನೆಕಾಯಿ, ಹೂಕೋಸು ಮೊದಲಾದ ತರಕಾರಿಗಳ ಬೆಲೆ ಭಾರೀ ಹೆಚ್ಚಳವಾಗಿದೆ.
ರಾಜ್ಯದಲ್ಲಿ ಹವಾಮಾನ ವೈಪರೀತ್ಯದಿಂದ ಮಳೆಯಾಗಿದ್ದು, ತರಕಾರಿ ಬೆಳೆ ನಾಶವಾಗಿದೆ. ಈ ಕಾರಣದಿಂದ ಮಾರುಕಟ್ಟೆಗೆ ಕಡಿಮೆ ಪ್ರಮಾಣದ ತರಕಾರಿ ಬರುತ್ತಿದ್ದು, ಬೆಲೆಯಲ್ಲಿ ದಿಢೀರ್ ಏರಿಕೆಯಾಗಿದೆ ಎಂದು ಹೇಳಲಾಗಿದೆ.