ದೇಶದೊಳಗಿನ ವಿಮಾನ ಯಾನಕ್ಕೂ ಮುನ್ನ ಕೋವಿಡ್-19 ನೆಗೆಟಿವ್ ಎಂದು ತಿಳಿಸುವ ಆರ್‌ಟಿ-ಪಿಸಿಆರ್ ವರದಿ ತೋರಿಸಬೇಕೆಂಬ ನಿಯಮದಿಂದ ಪ್ರಯಾಣಿಕರಿಗೆ ಭಾರೀ ಕಿರಿಕಿರಿ ಅನುಭವಿಸಬೇಕಾದ ಪ್ರಸಂಗ ಬಂದಿದೆ.
ಈ ವಿಚಾರವಾಗಿ ಪ್ರಯಾಣಿಕರಿಗೆ ನಿರಾಳತೆ ಕೊಡಲೆಂದು, ಕೋವಿಡ್ ಲಸಿಕೆ ಪಡೆದ ಪ್ರಮಾಣ ಪತ್ರ ಇರುವ ಮಂದಿಗೆ ಆರ್‌ಟಿ-ಪಿಸಿಆರ್ ಪ್ರಮಾಣೀಕರಣ ತೋರುವ ಅಗತ್ಯತೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದ್ದು, ತನ್ಮೂಲಕ ದೇಸೀ ವಿಮಾನಯಾನವನ್ನು ಸುಗಮವಾಗಿ ನಡೆಸಿಕೊಂಡು ಹೋಗಲು ಆಲೋಚಿಸುತ್ತಿದೆ.
ಅನೇಕ ಸಚಿವಾಲಯಗಳ ಜಂಟಿ ತಂಡದ ಜೊತೆಗೆ ವಿಮಾನಯಾನ ಕ್ಷೇತ್ರದ ದಿಗ್ಗಜರು ಈ ಸಂಬಂಧ ಮಾತುಕತೆಯಲ್ಲಿದ್ದು, ಲಸಿಕೆ ಪಡೆದ ಪ್ರಯಾಣಿಕರಿಗೆ ಆರ್‌ಟಿ-ಪಿಸಿಆರ್ ಪ್ರಮಾಣೀಕರಣದ ಕುರಿತಾಗಿ ಅಂತಿಮ ನಿರ್ಧಾರಕ್ಕೆ ಬರಲಿದ್ದಾರೆ.
“ಆರೋಗ್ಯ ಇಲಾಖೆ ಸೇರಿದಂತೆ ಅನೇಕ ಸಚಿವಾಲಯಗಳ ಜಂಟಿ ತಂಡವೊಂದು ಈ ಬಗ್ಗೆ ಚರ್ಚೆಯಲ್ಲಿದೆ. ಈ ಸಂಬಂಧ ನಿರ್ಧಾರವನ್ನು ನಾಗರಿಕ ವಿಮಾನಯಾನದ ಸಚಿವಾಯವೊಂದೇ ತೆಗೆದುಕೊಳ್ಳುವುದಿಲ್ಲ. ಆರೋಗ್ಯವು ರಾಜ್ಯಗಳ ಸುಪರ್ದಿಯಲ್ಲಿರುವ ವಿಚಾರ. ಪ್ರಯಾಣಿಕರಿಗೆ ನೆಗೆಟಿವ್ ಆರ್‌ಟಿ-ಪಿಸಿಆರ್ ದಾಖಲೆ ಕೇಳಬೇಕೇ ಬೇಡವೇ ಎಂಬುದು ಸಂಬಂಧಪಟ್ಟ ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟ ವಿಷಯ” ಎಂದು ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.
ಇದೇ ವೇಳೆ, ಕೋವಿಡ್ ಲಸಿಕೆ ಕಾರ್ಯಕ್ರಮಗಳು ಜನಸಂಖ್ಯಾ ವೈಪರೀತ್ಯದಿಂದ ನಿಧಾನವಾಗಿ ಸಾಗುತ್ತಿರುವ ಕಾರಣ, ಉಳ್ಳವರು ವಿದೇಶಗಳಿಗೆ ಹೋಗಿ ಲಸಿಕೆ ಹಾಕಿಸಿಕೊಳ್ಳಲು ’ವ್ಯಾಕ್ಸಿನ್ ಪಾಸ್‌ಪೋರ್ಟ್’ ಕಾರ್ಯಕ್ರಮ ಪರಿಚಯಿಸುವ ಬಗ್ಗೆಯೂ ಮಾತುಕತೆಗಳು ಕೇಳಿಬಂದಿವೆ.