ಭಾರತೀಯ ರೈಲ್ವೆ ಸೇವೆಯನ್ನ ಇನ್ನೂ ಹೈಫೈ ಮಾಡುವುದಕ್ಕಾಗಿ ಹಣ ಖರ್ಚು ಮಾಡಲು ನೀವಿನ್ನು ತಯಾರಾಗೋಕೆ ಅಡ್ಡಿ ಇಲ್ಲ. ಏಕೆಂದರೆ ಬಹಳ ಸಮಯದಿಂದ ಚರ್ಚೆಯಲ್ಲಿದ್ದ ಏರ್ಪೋರ್ಟ್ಗಳಂತೆಯೇ ರೈಲ್ವೆ ನಿಲ್ದಾಣಗಳಲ್ಲೂ ಯೂಸರ್ ಡೆವಲಪ್ಮೆಂಟ್ ಫೀಸನ್ನು ಇನ್ಮೇಲೆ ತೆಗೆದುಕೊಳ್ಳಲಾಗುತ್ತೆ.
ಈ ವಿಚಾರವಾಗಿ ಕೇಂದ್ರ ರೈಲ್ವೆ ಸಚಿವಾಲಯ ಕ್ಯಾಬಿನೆಟ್ ನೋಟ್ ಜಾರಿ ಮಾಡಿದೆ. ಅಂದರೆ ಯುಡಿಎಫ್ ಜಾರಿಗೆ ಬರಲು ಇನ್ನು ಒಂದು ಹೆಜ್ಜೆ ಮಾತ್ರ ಬಾಕಿ ಉಳಿದಿದೆ. ನೀತಿ ಆಯೋಗದೊಂದಿಗೆ ಚರ್ಚೆ ನಡೆಸಿದ ಬಳಿಕ ಯುಡಿಎಫ್ ಕ್ಯಾಬಿನೆಟ್ ನೋಟ್ ಜಾರಿ ಮಾಡಲಾಗಿದೆ. ಫೆಬ್ರವರಿಯ ಮೊದಲ ವಾರದಲ್ಲಿ ರೈಲ್ವೆ ಸಚಿವಾಲಯ ಹಾಗೂ ನೀತಿ ಆಯೋಗದ ನಡುವೆ ನಡೆದ ಮಾತುಕತೆಯಲ್ಲಿ ಯುಡಿಎಫ್ ಫಾರ್ಮುಲಾ ವಿಚಾರದಲ್ಲಿ ಒಮ್ಮತದ ನಿರ್ಧಾರ ಕೈಗೊಳ್ಳಲಾಗಿದೆ.
ರೈಲ್ವೆ ನಿಲ್ದಾಣಗಳಲ್ಲಿ ಪ್ರಯಾಣಿಕರಿಂದ ಈ ಶುಲ್ಕವನ್ನ ತೆಗೆದುಕೊಳ್ಳುವ ಸಲುವಾಗಿ ಕೇಂದ್ರ ರೈಲ್ವೆ ಸಚಿವಾಲಯ ಸಿದ್ಧತೆ ನಡೆಸುತ್ತಿದೆ. ಎಲ್ಲಾ ಹಂತಗಳು ಮುಗಿದ ಬಳಿಕ ಈ ಶುಲ್ಕ ವಸೂಲಾತಿ ಪ್ರಕ್ರಿಯೆ ಜಾರಿಯಾಗಲಿದೆ.
ಈಗ ಎಲ್ಲರಲ್ಲೂ ಕಾಡುವ ಪ್ರಶ್ನೆ ಅಂದರೆ ಪ್ರತಿಯೊಬ್ಬ ಪ್ರಯಾಣಿಕನೂ ಈ ಯುಡಿಎಫ್ಗೆ ಹಣ ವ್ಯಯಿಸಲೇಬೇಕೆ..? ಪ್ರತಿ ನಿಲ್ದಾಣಗಳಲ್ಲೂ ಈ ಹಣವನ್ನ ವಸೂಲಿ ಮಾಡಲಾಗುತ್ತದೆಯೇ ಎಂದು. ಆದರೆ ಈ ಶುಲ್ಕ ಖಾಸಗಿ ಕಂಪನಿಗಳಿಂದ ಅಭಿವೃದ್ಧಿ ಕಾಣುತ್ತಿರುವ ರೈಲ್ವೆ ನಿಲ್ದಾಣಗಳಲ್ಲಿ ಮಾತ್ರ ಜಾರಿಗೆ ಬರಲಿದೆ. ನಮ್ಮ ದೇಶದಲ್ಲಿ 700 ರಿಂದ 1000 ರೈಲ್ವೆ ನಿಲ್ದಾಣಗಳಲ್ಲಿ ಈ ಯುಡಿಎಫ್ ಪಾವತಿ ಮಾಡಬೇಕಾಗುತ್ತೆ ಎಂದು ರೈಲ್ವೆ ಬೋರ್ಡ್ ಸಿಇಒ ಮಾಹಿತಿ ನೀಡಿದ್ದಾರೆ. ಇದರಲ್ಲಿ ದೆಹಲಿ, ಮುಂಬೈ, ಇಂದೋರ್ ಹಾಗೂ ಚಂಡೀಘಡ್ನ ರೈಲ್ವೆ ನಿಲ್ದಾಣಗಳು ಇವೆ.
ಯುಡಿಎಫ್ಗೆ ಎಷ್ಟು ಹಣವನ್ನ ವ್ಯಯಿಸಬೇಕು ಅನ್ನೋ ವಿಚಾರವಾಗಿ ಈವರೆಗೆ ಯಾವುದೇ ನಿರ್ಧಾರವನ್ನ ಕೇಂದ್ರ ಸಚಿವಾಲಯ ಪ್ರಕಟಿಸಿಲ್ಲ. ಆದರೆ 30 ರಿಂದ 40 ರೂಪಾಯಿ ಶುಲ್ಕ ವಸೂಲಾತಿ ಮಾಡಬಹುದೆಂದು ಅಂದಾಜಿಸಲಾಗಿದೆ. ವಿವಿಧ ಶ್ರೇಣಿಯ ಟಿಕೆಟ್ಗಳಿಗೆ ಯುಡಿಎಫ್ ಮೊತ್ತ ಬದಲಾಗಬಹುದು. ಅಂದರೆ ಎಸಿ1ಗೆ ಅತೀ ಹೆಚ್ಚು, ಎಸಿ 2 ವಿಭಾಗಕ್ಕೆ ಸ್ವಲ್ಪ ಕಡಿಮೆ, ಎಸಿ3ಗೆ ಅದಕ್ಕೂ ಕಡಿಮೆ ಈ ರೀತಿ ಶುಲ್ಕವನ್ನ ವಿಧಿಸಬಹುದು ಎಂದು ಅಂದಾಜಿಸಲಾಗಿದೆ.